ಮಡಿಕೇರಿ, ಅ. ೨೩ : ಇದೊಂದು ಆಕಸ್ಮಿಕವಾದರೂ ಹೃದಯವಿದ್ರಾವಕ ಘಟನೆ. ವಿಧಿಲೀಲೆಯಿಂದಾಗಿ ಸಾವು ಹೇಗೆಲ್ಲ ಎದುರಾಗುತ್ತದೆ ಎಂಬ ಅಚ್ಚರಿದಾಯಕವಾದ ಅಪಘಾತವೊಂದರಲ್ಲಿ ನಿವೃತ್ತ ಪೊಲೀಸರೊಬ್ಬರು ಬಲಿಯಾಗಿದ್ದಾರೆ. ಪುತ್ರ ಚಾಲಿಸುತ್ತಿದ್ದ ಜೀಪ್, ಸ್ಕೂಟರ್ನಲ್ಲಿ ತೆರಳುತ್ತಿದ್ದ ತಂದೆಗೆ ಡಿಕ್ಕಿಯಾಗಿದ್ದು ತಂದೆ ಮೃತಪಟ್ಟಿರುವ ದುರಂತ ಘಟನೆ ಇದಾಗಿದೆ. ಚೇರಂಬಾಣೆ ಕೊಳಗದಾಳುವಿನ ನಿವೃತ್ತ ಪೊಲೀಸ್ ಬಡ್ಡೀರ ದೇವಯ್ಯ (೬೫) ಅವರು ಸಾವಿಗೀಡಾಗಿರುವ ವ್ಯಕ್ತಿಯಾಗಿದ್ದಾರೆ. ನಿನ್ನೆ ಅಪರಾಹ್ನ ಈ ಘಟನೆ ನಡೆದಿದೆ. ಆಯುಧ ಪೂಜೆಯ ಹಿನ್ನೆಲೆಯಲ್ಲಿ ತಂದೆ ಹಾಗೂ ಮಗ ಎರಡು ವಾಹನದಲ್ಲಿ ಚೇರಂಬಾಣೆಯ ಸರ್ವಿಸ್ ಸ್ಟೇಷನ್ಗೆ ತೆರಳಿದ್ದರು. ತಂದೆ ಪುತ್ರಿಯ ಸ್ಕೂಟಿಯಲ್ಲಿ ಬಂದಿದ್ದರೆ ಪುತ್ರ ಮಿಥುನ್ ಜೀಪ್ನಲ್ಲಿ ಬಂದಿದ್ದರು. ಸರ್ವಿಸ್ ಸ್ಟೇಷನ್ನಲ್ಲಿ ಒಟ್ಟಿಗೆ ಇದ್ದ ಇವರಿಬ್ಬರು ಎರಡು ವಾಹನಗಳನ್ನು ಸರ್ವಿಸ್ ಮಾಡಿಸಿ ನಂತರ ಅಲ್ಲಿನ ಪೆಟ್ರೋಲ್ ಬಂಕ್ಗೆ ತೆರಳಿ ಇಂಧನ ತುಂಬಿಸಿಕೊAಡು ಮನೆಯತ್ತ ಮರಳುತ್ತಿದ್ದರೆನ್ನಲಾಗಿದೆ. ಸ್ಕೂಟಿಯಲ್ಲಿ ದೇವಯ್ಯ ಅವರು ಮುಂದೆ ಸಾಗುತ್ತಿದ್ದರು. ಇವರು ಈ ಸಂದರ್ಭ ಪರಿಚಯದ ಯಾರನ್ನೋ ನೋಡಿ ಸ್ಕೂಟಿಯನ್ನು ನಿಲ್ಲಿಸಿದ್ದಾರೆ. ಈ ವೇಳೆ ಹಿಂಬದಿಯಿAದ ಪುತ್ರ ಮಿಥುನ್ ಚಲಾಯಿಸಿಕೊಂಡು ಬರುತ್ತಿದ್ದ ಜೀಪ್ ಏಕಾಏಕಿ ಸ್ಕೂಟರ್ ನಿಲುಗಡೆಗೊಂಡಿದ್ದರಿAದ ನಿಯಂತ್ರಣ ಸಿಗದೆ ಸ್ಕೂಟಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ.
ಘಟನೆಯಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ರಕ್ತಸ್ರಾವಕ್ಕೆ ಒಳಗಾದ ದೇವಯ್ಯ ಅವರನ್ನು ಮಡಿಕೇರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸಗೆ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ದೇವಯ್ಯ ಅವರು ಮೃತಪಟ್ಟಿದ್ದಾರೆ.
ಈ ಆಕಸ್ಮಿಕ ಘಟನೆ ಮನೆ ಮಂದಿಯನ್ನು ಆಘಾತಕ್ಕೀಡುಮಾಡಿದಂತಾಗಿದೆ. ಘಟನೆ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಠಾಣಾಧಿಕಾರಿ ಶೋಭಾ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಮೃತ ದೇವಯ್ಯ ಅವರು ಈ ಹಿಂದೆ ಡಿ.ಎ.ಆರ್.ನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಂತ್ಯಕ್ರಿಯೆ ಇಂದು ಸ್ವಗ್ರಾಮದಲ್ಲಿ ನೆರವೇರಿತು.