ಮುಳ್ಳೂರು, ಅ. ೨೩: ಸಮಿಪದ ರೋಟರಿ ಮಲ್ಲೇಶ್ವರ ಆಲೂರು ಸಿದ್ದಾಪುರ ಸಂಸ್ಥೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಶಿಕ್ಷಣ ಕ್ಷೇತ್ರದಿಂದ ಬಡುಬನಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಜಾನ್ಸಿ, ಇಂಜಿನಿಯರ್ ಕ್ಷೇತ್ರದಿಂದ ಗುಣಮಟ್ಟದ ಕಾಮಗಾರಿ ನೀಡುತ್ತಿರುವ ಲೋಕೋಪಯೋಗಿ ಗುತ್ತಿಗೆದಾರ ಮತ್ತು ಇಂಜಿನಿಯರ್ ಟಿ.ಆರ್. ಪುರುಷೋತ್ತಮ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಸೇವೆಯಲ್ಲಿ ತೊಡಗಿಸಿಕೊಂಡು ಇತ್ತೀಚಿಗೆ ನಡೆದ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಜಯಗಳಿಸಿ ಇದೀಗ ಸಂಘದ ಅಧ್ಯಕ್ಷರಾಗಿರುವ ಎಸ್.ಜೆ. ಪ್ರಸನ್ನಕುಮಾರ್, ನಿರ್ದೇಶಕರಾಗಿ ಆಯ್ಕೆಯಾಗಿರುವ ಎ.ಜೆ. ವಿಜಯ್ ಮತ್ತು ವೀಣಾ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ರೋಟರಿ ಭವನದಲ್ಲಿ ನಡೆದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಸಾಧಕರು ಮಾತನಾಡಿದರು. ಕಾರ್ಯಕ್ರಮದಲ್ಲಿ ರೋಟರಿ ಮಲ್ಲೇಶ್ವರ ಆಲೂರುಸಿದ್ದಾಪುರ ಕ್ಲಬ್ ಅಧ್ಯಕ್ಷ ಹೆಚ್.ಆರ್. ಉದಯ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂಪತ್, ರೋಟರಿ ಸಂಸ್ಥೆ ಪದಾಧಿಕಾರಿಗಳಾದ ಹೆಚ್.ಇ. ತಮ್ಮಯ್ಯ, ಎಂ.ಇ. ವೆಂಕಟೇಶ್, ತ್ಯಾಗರಾಜ್, ಜಿ.ಎಂ. ಹೇಮಂತ್, ಲೋಕೇಶ್, ಹೆಚ್.ಕೆ. ಶಿವಪ್ರಕಾಶ್, ಲತೇಶ್, ದಯಾನಂದ್, ಕಿರಣ್, ಹೆಚ್.ಬಿ. ಕುಶ ರೋಟರಿ ಸದಸ್ಯರು ಹಾಗೂ ರೋಟರಿ ಸದಸ್ಯರ ಕುಟುಂಬಸ್ಥರು ಹಾಜರಿದ್ದರು.