ನಾಪೋಕ್ಲು, ಅ. ೨೩: ಕೊಡವ ಕುಟುಂಬಗಳ ನಡುವಿನ ಹಗ್ಗಜಗ್ಗಾಟ ಸ್ಪರ್ಧೆ ಬೊಟ್ಟೋಳಂಡ ಕಪ್- ೨೦೨೪ ಈ ಬಾರಿ ನಾಪೋಕ್ಲುವಿನಲ್ಲಿ ನಡೆಯಲಿದ್ದು, ಇದರ ಲೋಗೋ ಬಿಡುಗಡೆ ಕಾರ್ಯಕ್ರಮವನ್ನು ತಾ.೨೯ ರಂದು ಮಡಿಕೇರಿ ಬಳಿಯ ಕಡಗದಾಳುವಿನ ಕ್ಯಾಪಿಟಲ್ ವಿಲೇಜ್ನಲ್ಲಿ ಏರ್ಪಡಿಸಲಾಗಿದೆ ಎಂದು ಬೊಟ್ಟೋಳಂಡ ಕಪ್ ಸಂಚಾಲಕ ಬೊಟ್ಟೋಳಂಡ ಮಿಟ್ಟು ಪೂಣಚ್ಚ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಗೋ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಟ್ಟೋಳಂಡ ಪೂಣಚ್ಚ (ಅಚ್ಚಿ) ವಹಿಸಲಿದ್ದು, ವೇದಿಕೆಯಲ್ಲಿ ಕಾಫಿ ಬೆಳೆಗಾರ ವಾಸು ಮುತ್ತಪ್ಪ, ನಿವೃತ್ತ ಸರ್ಕಲ್ ಇನ್ಸ್ಪೆಕ್ಟರ್ ಬೊಟ್ಟೋಳಂಡ ಲಿಂಗಪ್ಪ ಉಪಸ್ಥಿತರಿರುತ್ತಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕ್ ಇನ್ಸ್ ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು. ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಅಧ್ಯಕ್ಷ ಪೊನ್ನೊಲತಂಡ ಕಿರಣ್ ಪೊನ್ನಪ್ಪ ಪಾಲ್ಗೊಳ್ಳಲಿದ್ದಾರೆ.
ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಪ್ರಥಮವಾಗಿ ೨೦೨೨ರಲ್ಲಿ ಪೊನ್ನೋಲತಂಡ ಕುಟುಂಬಸ್ಥರು ಕಕ್ಕಬ್ಬೆಯಲ್ಲಿ ಆರಂಭಿಸಿದ್ದರು. ಎರಡನೇ ವರ್ಷದ ಹಗ್ಗಜಗ್ಗಾಟ ಸ್ಪರ್ಧೆ ೨೦೨೩ ರಲ್ಲಿ ಟಿ-ಶೆಟ್ಟಿಗೇರಿಯಲ್ಲಿ ಚಟ್ಟಂಗಡ ಕುಟುಂಬಸ್ಥರು ನಡೆಸಿದ್ದು, ಮೂರನೇ ವರ್ಷದ ಹಗ್ಗಜಗ್ಗಾಟ ಸ್ಪರ್ಧೆಯನ್ನು ಬೊಟ್ಟೋಳಂಡ ಕುಟುಂಬಸ್ಥರು ನಾಪೋಕ್ಲುವಿನ ಜೂನಿಯರ್ ಕಾಲೇಜು ಮೈದಾನದಲ್ಲಿ ೧೫ ಏಪ್ರಿಲ್ ೨೦೨೪ ರಿಂದ ೪ ದಿನಗಳ ಕಾಲ ಆಯೋಜಿಸಿದ್ದಾರೆ ಎಂದು ಮಿಟ್ಟು ಪೂಣಚ್ಚ ಹೇಳಿದರು.
ಕ್ರೀಡೋತ್ಸವದಲ್ಲಿ ಕೊಡವ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬೊಟ್ಟೋಳಂಡ ಕಪ್ ಕಾರ್ಯಾಧ್ಯಕ್ಷ ಬೊಟ್ಟೋಳಂಡ ಬಿ. ಗಣೇಶ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬೊಟ್ಟೋಳಂಡ ಕಪ್ ಖಜಾಂಚಿ ಬೊಟ್ಟೋಳಂಡ ರಮೇಶ್ ಪೊನ್ನಯ್ಯ, ಸಹ ಕಾರ್ಯದರ್ಶಿ ಬೊಟ್ಟೋಳಂಡ ಯು. ರವಿ ಕರುಂಬಯ್ಯ ಉಪಸ್ಥಿತರಿದ್ದರು.