ಕೂಡಿಗೆ, ಅ. ೨೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಕಾಡಾನೆಗಳು ಜಮೀನಿಗೆ ದಾಳಿ ಮಾಡುವುದನ್ನು ತಡೆಗಟ್ಟಲು ಅನುಸರಿಸಬಹುದಾದ ಕೆಲವು ಮಾಹಿತಿಯನ್ನು ಅರಣ್ಯ ಇಲಾಖೆಯ ನಿವೃತ್ತ ಪಶು ವೈದ್ಯಾಧಿಕಾರಿ ಮತ್ತು ಅರಣ್ಯ ಇಲಾಖೆಯ ಎನ್.ಜಿ.ಓ. ಆಗಿರುವ ಡಾ. ರುದ್ರ ಅವರು ಹುದುಗೂರು ಗ್ರಾಮದ ಕ್ರೀಡಾಂಗಣದಲ್ಲಿ ನೀಡಿದರು.
ಪಶು ವೈದ್ಯರು ಪ್ರಾತ್ಯಕ್ಷತೆಯ ಮೂಲಕ ಕಾಡಾನೆಗಳು ದಿನಂಪ್ರತಿ ಜಮೀನಿಗೆ ದಾಳಿ ಮಾಡುವ ದಾರಿಯಲ್ಲಿ ಒಂದು ಚೀಲದಲ್ಲಿ ಸ್ವಲ್ಪ ಒಣಹುಲ್ಲು, ಖಾರಮೆಣಸಿನಕಾಯಿ ಪುಡಿಯನ್ನು ಬಳಸಿ ಅದರ ಹೊಗೆಯನ್ನು ಮಾಡುವುದರಿಂದ, ಗಾಳಿಯಲ್ಲಿ ಖಾರದ ಹೊಗೆಯು ಪ್ರಸಾರವಾಗುವುದರಿಂದ ಕಾಡಾನೆಗಳು ಜಮೀನಿಗೆ ಬರುವುದು ಕಡಿಯಾಗುವ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ತಿಳಿಸಿದರು.
ಇದರ ಜೊತೆಯಲ್ಲಿ ಆನೆಗೆ ಮದ ಬರುವ ಬಗ್ಗೆ ಮತ್ತು ಕಾಡಾನೆಗಳು ಮನುಷ್ಯನ ಬೆವರಿನ ವಾಸನೆಯನ್ನು ಗೃಹಿಸುವ ಶಕ್ತಿ ಬಗ್ಗೆ ಸೇರಿದಂತೆ ಆನೆಗಳು ಆಹಾರ ಸ್ಥಳದಿಂದ ಬೇರೆ ಆನೆಗಳಿಗೆ ಆಹಾರ ಸಂಗ್ರಹದ ಮಾಹಿತಿಯನ್ನು ರವಾನಿಸುವ ಶಕ್ತಿ ಇರುವ ಬಗ್ಗೆ ವೈದ್ಯಾಧಿಕಾರಿ ಡಾ. ರುದ್ರ ಅವರು ತಿಳಿಸಿದರು.
ಈ ಸಂದರ್ಭ ಉಮಾಮಹೇಶ್ವರ ದೇವಾಲಯ ಸಮಿತಿ ಉಪಾಧ್ಯಕ್ಷ ಮುತ್ತಪ್ಪ, ಯುವಕ ಸಂಘದ ಅಧ್ಯಕ್ಷ ಶರತ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್. ರವಿ. ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಸತೀಶ್ ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಹುದುಗೂರು, ಬ್ಯಾಡಗೊಟ್ಟ ಗ್ರಾಮದ ನೂರಾರು ಗ್ರಾಮಸ್ಥರು, ಯುವಕ ಸಂಘದ ಪದಾಧಿಕಾರಿಗಳು, ಗ್ರಾಮದ ಮುಖ್ಯಸ್ಥರು ಹಾಜರಿದ್ದರು.