ಶನಿವಾರಸಂತೆ, ಅ. ೨೩: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಕ್ಷೇತ್ರದಲ್ಲಿ ಭಾನುವಾರ ಬೆಳಿಗ್ಗೆ ನವರಾತ್ರಿಯ ೮ ನೇ ದಿನ ನವದುರ್ಗೆಯರ ದುರ್ಗಾಷ್ಟಮಿ ಸ್ವರೂಪ ಮಹಾಗೌರಿ ದೇವಿಯ ಆರಾಧನಾ, ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಟ್ಟಿತು.

ಕ್ಷೇತ್ರದಲ್ಲಿ ಹಿಂದೂ ಜಾಗರಣಾ ವೇದಿಕೆಯ ಸೇವಾರ್ಥದೊಂದಿಗೆ, ಭಕ್ತಾದಿಗಳು ಮಹಾಗೌರಿ ದೇವಿ, ಚಾಮುಂಡೇಶ್ವರಿ ದೇವಿ ಮತ್ತು ಗುಳಿಗ ದೈವಕ್ಕೆ ನಾನಾ ಬಗೆಯ ಹೂಗಳು, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿದರು. ಅರ್ಚಕರಾದ ಪ್ರಕಾಶ್ಚಂದ್ರ ಸುವರ್ಣ ಹಾಗೂ ಸಂತೋಷ್ ಕರ್ಕೇರ ಪೂಜಾ ವಿಧಿ ನೆರವೇರಿಸಿದರು.

ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳಾದ ಸೋಮಶೇಖರ್ ಪೂಜಾರಿ, ಅರುಣ್ ಕುಮಾರ್, ಸುರೇಶ್ ಕುಮಾರ್, ಪೃಥ್ವಿ ಹಾಗೂ ಕುಟುಂಬಸ್ಥರು, ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ನಡೆದು, ದುರ್ಗಾಷ್ಟಮಿ ಪೂಜಾ ಕಾರ್ಯ ಸಂಪನ್ನವಾಯಿತು.