ಅಶ್ವಯುಜ ಮಾಸದ ಶುಕ್ಲ ಪಕ್ಷದ ನವಮಿಯ ದಿನ ಆಯುಧಪೂಜಾ ಹಬ್ಬವನ್ನು ಆಚರಿಸುತ್ತೇವೆ. ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗ. ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಆಯುಧ ಪೂಜೆಗೆ ಬಹಳ ಮಹತ್ವವಿದೆ ಹಾಗೂ ಅರ್ಥಪೂರ್ಣ ಹಬ್ಬವೂ ಹೌದು, ಹಾಗೇ ಶ್ರದ್ಧಾಭಕ್ತಿಯಿಂದ ಆಚರಿಸುವ ಹಬ್ಬ ಕೂಡ. ಇದಕ್ಕೆ ಪುರಾತನ ಇತಿಹಾಸವಿದೆ, ಅದು ಪೌರಾಣಿಕವು ಆಗಿದೆ. ಮಹಾಭಾರತ ಕಾಲದಲ್ಲಿ ಪಾಂಡವರು ತಮ್ಮ ಆಯುಧಗಳಿಗೆ ಪೂಜೆ ಮಾಡಿ, ಅದನ್ನು ತುಂಬಾ ಭಕ್ತಿ ಗೌರವದಿಂದ ಬಟ್ಟೆಯಲ್ಲಿ ಸುತ್ತಿ ಶಮೀ ವೃಕ್ಷದ ಮೇಲಿಟ್ಟಂತಹ ಮಹತ್ವದ ವಿವರಗಳು ಮಹಾಭಾರತದಲ್ಲಿದೆ. ಅಂದು ಹೋರಾಟಗಳಿಗೆ, ಧರ್ಮಯುದ್ಧ ಗೆಲ್ಲುವಲ್ಲಿ ಆಯುಧಗಳ ಪಾತ್ರ ಮುಖ್ಯವಿತ್ತು. ರಾಜರುಗಳಿಗಂತೂ ಯುದ್ಧ ಸಂದರ್ಭಗಳಲ್ಲಿ ಆಯುಧಗಳೇ ಪ್ರಧಾನವೆನ್ನಿಸಿ ಸ್ವರಕ್ಷಣೆಗೂ, ರಾಜ್ಯ ರಕ್ಷಣೆಗೂ ವಿಜಯದ ಯಾತ್ರೆಗಳಲ್ಲೂ ಆಯುಧಗಳು ಪ್ರಧಾನವೆನಿಸಿದ್ದವು. ಅಂದು ರಾಜರು ಶಕ್ತಿ ದೇವತೆಗಳನ್ನು ಆಯುಧಗಳ ಮೂಲಕ ಪೂಜಿಸಲಾರಂಭಿಸಿದರು.

ಹೀಗೆ ನಡೆದ ಗೌರವ, ಭಕ್ತಿ ಪೂರ್ವಕ ಆಚರಣೆಯ ವ್ಯಾಪ್ತಿಯು ಕ್ರಮೇಣ ಹಿರಿದಾಗತೊಡಗಿತು. ಜನರು ಸಮಾಜದಲ್ಲಿ ಬೇರೆ-ಬೇರೆ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಾಗ ಜೀವನಾಧಾರ ವೃತ್ತಿಗಳಲ್ಲಿ ಹಲವು ಪರಿಕರಗಳನ್ನು ಆಯುಧದಂತೆ ಉಪಯೋಗಿಸತೊಡಗಿದರು. ಅವರ ವೃತ್ತಿಯಾಧಾರಿತ ಪರಿಕರಗಳು, ಅನ್ನ ನೀಡುವ ಆಯುಧಗಳಂತಾದಾಗ ವರ್ಷದಲ್ಲಿ ಒಂದು ದಿನ ತಮ್ಮ ಪರಿಕರಗಳಿಗೆ ಪವಿತ್ರ ಪೂಜೆ ಸಲ್ಲಿಸಿ, ಹಬ್ಬದಾಚರಣೆ ಮಾಡಿ, ಅವುಗಳನ್ನು ಅಂದು ಶುಚಿಯಾಗಿಸಿ, ಭಕ್ತಿಯಿಂದ ಆರಾಧಿಸತೊಡಗಿದರು.

ಪಾಂಡವರು, ಮಹಾಭಾರತದಲ್ಲಿ ಧರ್ಮಕ್ಕಾಗಿ ಹೋರಾಡುವ ಸಂದರ್ಭದಲ್ಲಿ ತಮ್ಮ ವಿಜಯಯಾತ್ರೆ, ಧರ್ಮ ರಕ್ಷಣೆಯ ಪವಿತ್ರ ಕಾರ್ಯಕ್ಕೆ ಪ್ರಮುಖವಾದಂತಹ ಆಯುಧಗಳನ್ನು ಪೂಜಿಸಿ ಇಟ್ಟ ದಿನದಂದೇ ಪ್ರಜೆಗಳು ತಮ್ಮ ಜೀವನಾವಶ್ಯಕವಾದ ಮುಖ್ಯ ಪರಿಕರಗಳನ್ನು ಪೂಜಿಸುವ ಮೂಲಕ ಆಯುಧ ಪೂಜೆಯನ್ನು ಆಚರಿಸಿದರು. ರೈತರು ತಮ್ಮ ನೇಗಿಲುಗಳನ್ನು ಇತರ ಕೃಷಿ ಸಂಬAಧೀ ವಸ್ತುಗಳನ್ನು ಪೂಜಿಸಿದರೆ, ಪತ್ರಿಕಾಲಯಗಳಲ್ಲಿ, ಮುದ್ರಣಾಲಯಗಳು ಇತರ ಪ್ರಮುಖ ವಸ್ತುಗಳನ್ನು ಶುಚಿಗೊಳಿಸಿ, ಹೂವಿನ ಹಾರಗಳಿಂದ ಅಲಂಕರಿಸಿ, ಅರಶಿಣ, ಕುಂಕುಮವಿಟ್ಟು ಪೂಜೆಯನ್ನು ಸಂಭ್ರಮ, ಉತ್ಸಾಹದಿಂದ ಆಚರಿಸುತ್ತಾರೆ.

ಈ ದಿನದಂದು ಬಹುಮುಖ್ಯವಾಗಿ ವಾಹನಗಳನ್ನು ಪೂಜಿಸುತ್ತಾರೆ. ವಾಹನಗಳ ಪೂಜೆಯ ನಂತರ ಶೃಂಗರಿಸಿದ ವಾಹನಗಳಲ್ಲಿ ತಮ್ಮ ತಮ್ಮ ಮನೆಯವರನ್ನು ಕೂರಿಸಿಕೊಂಡು ಮೆರವಣಿಗೆ ಹೋಗಿ ಸಂಭ್ರಮಿಸುವದೊAದು ಆಚರಣೆಯಾಯಿತು. ಅಲ್ಲದೆ ಕೆಲವರು ಮನೆಗಳಲ್ಲಿ ಸಿಹಿ ತಿಂಡಿಗಳನ್ನು ತಯಾರಿಸುವ ಪರಿಪಾಠವು ಇದೆ. ಈ ಆಚರಣೆಯಿಂದ ನಮ್ಮ ಆಯುಧಗಳ ಜೊತೆ ಪವಿತ್ರವಾಗಿ ಸಂಭ್ರಮಿಸುವ ಅವಕಾಶವು ದೊರೆಯುತ್ತದೆ ಎನ್ನುವ ನಂಬಿಕೆ.

ಆಯುಧ ಪೂಜೆಯಂದು ಅಂಗಡಿಗಳು, ವಾಹನಗಳು ಶೃಂಗರಿಸಲ್ಪಡುತ್ತವೆ. ಮುಖ್ಯವಾಗಿ ಅಂದು ಸಾಂಸ್ಕೃತಿಕ ಕಾರ್ಯಕ್ರಮಗಳು, ತೇರುಗಳು, ಅವುಗಳ ಮೆರವಣಿಗೆ ಸ್ಪರ್ಧೆಗಳು ನಡೆಯುವವು. ಅಂದು ಅಲಂಕಾರ ಸ್ಪರ್ಧೆಗಳು, ಇತರ ಸ್ಪರ್ಧೆಗಳು ನಡೆಯುತ್ತವೆ.

ವಾಹನ ಚಾಲಕರು ಕೂಡ ಸಂಘಟಿತರಾಗಿ, ತಮ್ಮ ಸಂಘಗಳ ವತಿಯಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವರು. ಕತ್ತರಿ, ಚಾಕುವಿನಿಂದ ಹಿಡಿದು ರೇಡಿಯೋ, ಟಿ.ವಿ., ವಾಹನ ಯಂತ್ರಗಳ ತನಕ ಅಗ್ರಪೂಜೆ ಸಲ್ಲುತ್ತದೆ.

- ಎಸ್.ಕೆ. ಅಶ್ವಿನಿ, ಮಡಿಕೇರಿ.