ಮಡಿಕೇರಿ, ಅ. ೨೨: ದಸರಾ ಉತ್ಸವ ಪ್ರಯುಕ್ತ ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾಟದಲ್ಲಿ ಮಡಿಕೇರಿ ನಗರ ಠಾಣೆ ಪೊಲೀಸರ ತಂಡ ಜಯಗಳಿಸಿತು. ಮಡಿಕೇರಿ ವಿನಾಯಕ ತಂಡ ದ್ವಿತೀಯ ಸ್ಥಾನ ಗಳಿಸಿತು. ಮೊದಲ ಬಹುಮಾನವಾಗಿ ೨೦ ಸಾವಿರ ನಗದು, ದ್ವಿತೀಯ ಬಹುಮಾನವಾಗಿ ೧೦ ಸಾವಿರ ನಗದು ನೀಡಲಾಯಿತು. ತೃತೀಯ ಸ್ಥಾನವನ್ನು ಕುಶಾಲನಗರ ಜ್ಞಾನಭಾರತಿ ಸ್ಪೋಟ್ಸ್ ಕ್ಲಬ್, ನಾಲ್ಕನೇ ಸ್ಥಾನವನ್ನು ಮೆಡಿಕಲ್ ಕಾಲೇಜಿನ ಭಜರಂಗಬಲಿ ತಂಡ ಗಳಿಸಿ ಟ್ರೋಫಿಯನ್ನು ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಬಲ್ಲಮಾವಟಿ ಮಹಿಳಾ ತಂಡ ಪ್ರಥಮ, ಕಾವೇರಿ ಮಹಿಳಾ ತಂಡ ದ್ವಿತೀಯ, ಲಕ್ಷಿö್ಮ ಮಹಿಳಾ ತಂಡ ತೃತೀಯ ಸ್ಥಾನ ಗಳಿಸಿ ಟ್ರೋಫಿ ಪಡೆದುಕೊಂಡವು. ಪುರುಷರ ವಿಭಾಗದಲ್ಲಿ ೯, ಮಹಿಳೆಯರ ವಿಭಾಗದಲ್ಲಿ ೪ ತಂಡಗಳು ಭಾಗವಹಿಸಿದ್ದವು.
ಪಂದ್ಯಾಟದ ಉದ್ಘಾಟನೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಂದರರಾಜ್ ಉದ್ಘಾಟಿಸಿದರು. ಅತಿಥಿಗಳಾಗಿ ಕರ್ನಾಟಕ ಕಬಡ್ಡಿ ಅಸೋಸಿಯೇಷನ್ನ ಮಾಜಿ ಜಂಟಿ ಕಾರ್ಯದರ್ಶಿ ಹೆಚ್.ಎಸ್. ಉತ್ತಪ್ಪ, ಡಿವೈಎಸ್ಪಿ ಜಗದೀಶ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ಲೋಕೇಶ್, ‘ಶಕ್ತಿ’ ಸಂಪಾದಕರಾದ ಜಿ. ಚಿದ್ವಿಲಾಸ್, ದಸರಾ ಸಾಂಸ್ಕೃತಿಕ ಸಮಿತಿ ಸಂಚಾಲಕ ತೆನ್ನಿರಾ ಮೈನಾ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಸದಸ್ಯ ಮನ್ಸೂರ್, ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಕೆ.ಆರ್. ರವಿ, ಸಚಿನ್, ರಘುಚಂದ್ರಪ್ಪ, ಶಶಿ ಮತ್ತಿತರರು ಭಾಗವಹಿಸಿದ್ದರು. ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಕಪಿಲ್ ಕುಮಾರ್ ದುಗ್ಗಳ ಹಾಜರಿದ್ದರು. ಸಮಾರೋಪ ಸಮಾರಂಭದಲ್ಲಿ ದಾನಿ ಹರಪಳ್ಳಿ ರವೀಂದ್ರ, ಟೌನ್ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಕೆ. ಜಗದೀಶ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪ್ರದೀಪ್ ಕರ್ಕೇರ, ಹೆಚ್.ಎಸ್. ಉತ್ತಪ್ಪ, ನಿವೃತ್ತ ಪೊಲೀಸ್ ಕೃಷ್ಣ, ಕೆ.ಆರ್. ರವಿ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.