ಸೋಮವಾರಪೇಟೆ, ಅ. ೨೧: ನಿರ್ವಹಣೆಯ ಕೊರತೆಯಿಂದ ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿರುವ ಸೋಮವಾರಪೇಟೆ ಬಾಣಾವರ ರಸ್ತೆಯ ನಿರ್ವಹಣೆ ಕಾರ್ಯ ಮುಂದಿನ ಒಂದು ವಾರದೊಳಗೆ ಆರಂಭಿಸುವುದಾಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್ ತಿಳಿಸಿದ್ದಾರೆ.

ಬಾಣಾವರ- ಸೋಮವಾರಪೇಟೆ ರಾಜ್ಯ ಹೆದ್ದಾರಿಯನ್ನು ಕೆಲ ತಿಂಗಳ ಹಿಂದೆ ಪೂರ್ಣಗೊಳಿಸಿದ್ದು, ನಂತರದ ಮಳೆಗಾಲದಲ್ಲಿ ನಿರ್ವಹಣೆ ಮಾಡದೇ ಇದ್ದ ಪರಿಣಾಮ ಇದೀಗ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು, ಕಾಡು ಬೆಳೆದು ವಾಹನಗಳ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗಿದೆ.

ಬಹುತೇಕ ಕಡೆಗಳಲ್ಲಿ ತಿರುವಿನಿಂದ ಕೂಡಿರುವ ರಸ್ತೆಯ ಬದಿಯಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ಎದುರು ಭಾಗದಿಂದ ಆಗಮಿಸುವ ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸಲು ಕಷ್ಟಸಾಧ್ಯವಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗೆ ತೀವ್ರ ಸಮಸ್ಯೆ ಎದುರಿಸುತ್ತಿರುವ ಬಗ್ಗೆ, ಇಲಾಖೆಯ ನಿರ್ಲಕ್ಷö್ಯದ ಬಗ್ಗೆ ‘ಶಕ್ತಿ’ಯಲ್ಲಿ ವರದಿಯಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್ ಅವರು, ಮುಂದಿನ ೧ ವಾರದೊಳಗೆ ರಸ್ತೆಯ ನಿರ್ವಹಣೆ ಕಾಮಗಾರಿ ಆರಂಭಿಸಲು ಸಂಬAಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಹಬ್ಬ ಕಳೆದ ತಕ್ಷಣ ಕೆಲಸ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.