ಮಡಿಕೇರಿ, ಅ. ೨೧: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ, ನಿವೃತ್ತ ಎ.ಡಿ.ಜಿ.ಪಿ. ಹಾಗೂ ಈ ಹಿಂದೆ ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಭಾಸ್ಕರ ರಾವ್ ಅವರು ಮಡಿಕೇರಿಯ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿಯ ಶತಮಾನ ಭವನಕ್ಕೆ ಭೇಟಿ ನೀಡಿದರು. ಈ ಸಂದರ್ಭ ಭಾಸ್ಕರ ರಾವ್ ಹಾಗೂ ಅವರೊಂದಿಗೆ ಆಗಮಿಸಿದ್ದ ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾದ ರವೀಂದ್ರ ಅವರನ್ನು ಸಂಘದ ವತಿಯಿಂದ ಸ್ವಾಗತಿಸಲಾಯಿತು.

ನಂತರ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಾಸ್ಕರ್ ರಾವ್ ಅವರು ಮಾತನಾಡಿ, ಪ್ರತಿಯೊಬ್ಬರೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಪಡೆದುಕೊಳ್ಳುವಂತಾಗಬೇಕು, ಸದಸ್ಯತ್ವ ಹಣ ಪಾವತಿಸಲು ಸಾಧ್ಯವಾಗದವರು ಕೂಡ ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ. ತಾವೇ ಅವರ ಸದಸ್ಯತ್ವ ಹಣ ಪಾವತಿಸಿ ಸದಸ್ಯತ್ವ ನೀಡುವುದಾಗಿ ತಿಳಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಅದರ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಅವರ ನೇತೃತ್ವದಲ್ಲಿ ಇದೀಗ ಬ್ರಾಹ್ಮಣರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ತರಲಾಗಿದೆ ಎಂದರು. ವಿಪ್ರರ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಶಿಕ್ಷಣಕ್ಕೆ ರಾಜ್ಯ ಸಂಘದಿAದ ಹೆಚ್ಚಿನ ಸಹಾಯ ನೀಡುವುದಾಗಿ ಈ ಸಂದರ್ಭ ಭರವಸೆ ನೀಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವವನ್ನು ಜಿಲ್ಲೆಯ ಎಲ್ಲಾ ವಿಪ್ರ ಬಾಂಧವರು ಪಡೆದುಕೊಳ್ಳುವಂತೆ ಇದೇ ಸಂದರ್ಭ ಕರೆ ನೀಡಿದರು. ಜಿಲ್ಲೆಯ ವಿಪ್ರ ಸಂಘಟನೆಗಳ ಶಿಸ್ತುಬದ್ಧ ಕಾರ್ಯ ಚಟುವಟಿಕೆಗಳ ಬಗ್ಗೆ ಇದೇ ಸಂದರ್ಭ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷೆ ಗೀತಾ ಗಿರೀಶ್, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಹಿರಿಯರಾದ ಸಂಪತ್ ಸರಳಾಯ ಅವರನ್ನು ಭಾಸ್ಕರ್ ಅವರು ರಾಜ್ಯ ಸಂಘದ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕೋಶಾಧಿಕಾರಿ ಜಿ.ಆರ್. ರವಿಶಂಕರ್, ನಿರ್ದೇಶಕರು ಉಪಸ್ಥಿತರಿದ್ದರು.

ಗೋಣಿಕೊಪ್ಪ: ಗೋಣಿಕೊಪ್ಪ ವಿಪ್ರ ಸಭಾ ಭವನಕ್ಕೂ ಭೇಟಿ ನೀಡಿದ ಭಾಸ್ಕರ್ ರಾವ್ ಅವರು ಸಂಘದ ಸದಸ್ಯರೊಂದಿಗೆ ಸಮಾಲೋಚಿಸಿದರು. ಈ ಸಂದರ್ಭ ಬ್ರಾಹ್ಮಣ ಸಂಘಟನೆಯ ಮಹತ್ವದ ಬಗೆ ವಿವರವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ವಹಿಸಿದ್ದರು, ಇದೇ ಸಂದರ್ಭ ರಾಜ್ಯ ಸಂಘಟನೆಯ ಪರವಾಗಿ ಆಗಮಿಸಿದ ಮೈಸೂರಿನ ರವೀಂದ್ರ ಅವರು ರಾಜ್ಯ ಸಂಘದ ಪರಿಚಯವನ್ನು ಪ್ರಾಸ್ತಾವಿಕವಾಗಿ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ವಿಪ್ರ ಯುವ ಸಂಘದ ಸ್ಥಾಪಕ ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯಕಾರಿ ಮಂಡಳಿ ಸದಸ್ಯರಾದ ಶ್ರೀಧರ್ ನಲ್ಲಿತ್ತಾಯ ಅವರು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ರಾಜ್ಯ ಸಂಘದ ಪರವಾಗಿ ಪ್ರಭಾಕರ್ ನೆಲಿತ್ತಾಯ ಹಾಗೂ ಶಿವಪ್ರಸಾದ್ ಅವರನ್ನು ಶಾಲು ಹೊದಿಸಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಸನ್ಮಾನಿಸಿದರು. ಕೊಡಗು ಬ್ರಾಹ್ಮಣ ಕ್ಷೇಮಾಭಿವೃದ್ಧಿ ನಿಧಿಯ ಪದಾಧಿಕಾರಿಗಳು, ಭಗವತಿ ವಿಪ್ರ ಮಹಿಳಾ ಸಂಘದ ಅಧ್ಯಕ್ಷ ವಿಜಯಲಕ್ಷಿö್ಮ ಮತ್ತು ಪದಾಧಿಕಾರಿಗಳು, ರಾಜ್ಯ ವಿಪ್ರ ಮಹಿಳಾ ಘಟಕದ ಕಾರ್ಯಕಾರಣಿ ಸಮಿತಿ ಸದಸ್ಯರಾದ ಸವಿತಾ ಯೋಗೀಶ್ ಉಪಸ್ಥಿತರಿದ್ದರು.