ಸೋಮವಾರಪೇಟೆ, ಅ. ೨೨: ಲೋಕೋಪಯೋಗಿ ಇಲಾಖಾ ರಸ್ತೆಗಳ ವಾರ್ಷಿಕ ನಿರ್ವಹಣೆಗೆಂದು ಪ್ರತಿ ವರ್ಷ ಅನುದಾನ ಮೀಸಲಿದ್ದರೂ ತಾಲೂಕಿನ ಹಲವು ರಸ್ತೆಗಳು ನಿರ್ವಹಣೆಯ ಭಾಗ್ಯದಿಂದ ವಂಚಿತವಾಗಿವೆ. ಇದಕ್ಕೊಂದು ನಿದರ್ಶನ ಸೋಮವಾರಪೇಟೆ-ಬಾಣಾವರ ರಾಜ್ಯ ಹೆದ್ದಾರಿಯಾಗಿದೆ.

ಕೆಲ ತಿಂಗಳ ಹಿಂದಷ್ಟೇ ರೂ. ೧೦ ಕೋಟಿ ವೆಚ್ಚದಲ್ಲಿ ಬಾಣಾವರ ದಿಂದ ಸೋಮವಾರಪೇಟೆ ಪಟ್ಟಣದ ವರೆಗೆ ಮರು ಡಾಂಬರೀಕರಣ ಗೊಂಡಿರುವ ರಾಜ್ಯ ಹೆದ್ದಾರಿ ಪ್ರಸ್ತುತ ನಿರ್ವಹಣೆಯ ಕೊರತೆ ಎದುರಿಸುತ್ತಿದೆ.

ರಾಜ್ಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಗಿಡಗಂಟಿಗಳು ಬೆಳೆದು ಕಾಡು, ರಸ್ತೆಗೆ ಬಾಗಿವೆ. ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಪಟ್ಟಣದಿಂದ ಬಾಣಾವರ, ಕೊಣನೂರು, ಹೆಬ್ಬಾಲೆ-ಕುಶಾಲನಗರ, ತೊರೆನೂರು, ಆಲೂರು-ಸಿದ್ದಾಪುರ ಭಾಗಕ್ಕೆ ತೆರಳುವ ವಾಹನಗಳು ಇದೇ ರಸ್ತೆಯನ್ನು ಅವಲಂಭಿಸಿವೆ. ಖಾಸಗಿ, ಸರ್ಕಾರಿ ಬಸ್‌ಗಳು, ಶಾಲಾ-ಕಾಲೇಜು ವಾಹನಗಳು, ವಿಶ್ವ ವಿದ್ಯಾ ನಿಲಯದ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ರಸ್ತೆಯ ಎರಡೂ ಬದಿಯಲ್ಲಿ ಕಾಡು ಬೆಳೆದಿರುವುದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ.

ತಿರುವುಗಳಲ್ಲಿ ಎದುರು ಭಾಗದಿಂದ ಆಗಮಿಸುವ ವಾಹನಗಳು ಕಾಣಿಸದೇ ಹಲವು ಅವಘಡಗಳು ಸಂಭವಿಸಿವೆ. ಪಾದಚಾರಿಗಳು ಸಂಚರಿಸಲೂ ಸಮಸ್ಯೆಯಾಗಿದೆ. ತಕ್ಷಣ ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನಹರಿಸಿ ರಸ್ತೆಯ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.