ಮಡಿಕೇರಿ, ಅ. ೨೧ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಗಗನಯಾತ್ರಿಕರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯ ಅಂಗವಾಗಿ ನಡೆದ ಮಾನವ ರಹಿತ ಪರೀಕ್ಷಾ ಉಡಾವಣೆ (ವೆಹಿಕಲ್ ಅಬಾರ್ಟ್ ಮಿಷನ್) ಯಶಸ್ವಿಯಾಯಿತು. ನಿಗದಿತವಾಗಿ ಬೆಳಿಗ್ಗೆ ೭ ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದಿAದ ಉಡಾವಣೆಗೊಳ್ಳಬೇಕಿದ್ದ ಕ್ರೂ ಮಾಡ್ಯೂಲ್ಅನ್ನು ಹೊತ್ತ ಟಿ.ವಿ - ಡಿ೧ ರಾಕೆಟ್, ಪ್ರತಿಕೂಲ ಹವಾಮಾನದ ಕಾರಣ ಹಾಗೂ ಕೆಲ ತಾಂತ್ರಿಕ ದೋಷಗಳ ಕಾರಣ ೩ ಗಂಟೆಗಳು ತಡವಾಗಿ , ಅಂದರೆ ೧೦ ಗಂಟೆಗೆ ಉಡಾವಣೆಗೊಂಡಿತು. ಸುಮಾರು ೮:೪೫ ಕ್ಕೆ ಕೌಂಟ್ಡೌನ್ ವೇಳೆ ರಾಕೆಟ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ರಾಕೆಟ್ ಉಡಾವಣೆ ಪ್ರಕ್ರಿಯೆಯು, ಆಧುನಿಕ ‘ಅಟೋಮೆಟಿಕ್ ಲಾಂಚ್ ಸೀಕ್ವೆನ್ಸ್’ ಸಹಕಾರದಿಂದ ಸ್ವಯಂ ನಿಂತು ಅನಾಹುತವನ್ನು ತಪ್ಪಿಸಿತು. ಬಳಿಕ ೧೦ ಗಂಟೆಗೆ ಸುಸೂತ್ರವಾಗಿ ಉಡಾವಣೆಗೊಂಡಿತು.
೨೦೨೫ ರಲ್ಲಿ ಮಾನವ ಸಹಿತವಾಗಿ ನೌಕೆಯು ಉಡಾವಣೆಗೊಳ್ಳುವಾಗ ತುರ್ತು ಪರಿಸ್ಥಿತಿ ಎದುರಾದಲ್ಲಿ ಗಗನಯಾತ್ರಿಕರನ್ನು ರಕ್ಷಿಸಲು ಉದ್ದೇಶಿತ ಇಂದಿನ ಪರೀಕ್ಷಾ ಉಡಾವಣೆ ಯಶಸ್ವಿಯಾಗಿ ಜರುಗಿತು. ಶ್ರೀಹರಿಕೋಟಾದ ಕರಾವಳಿ ಪ್ರದೇಶದಿಂದ ಸುಮಾರು ೧೦ ಕಿ.ಮಿ ದೂರ ಬಂಗಾಳಕೊಲ್ಲಿಯಲ್ಲಿ ಇಳಿದ ಕ್ರೂ ಮಾಡ್ಯೂಲ್ಅನ್ನು ಭಾರತೀಯ ನೌಕಾಪಡೆಯ ಯೋಧರು ತಮ್ಮ ಹಡಗಿನಲ್ಲಿ ಸುರಕ್ಷಿತವಾಗಿ ಕರಾವಳಿಗೆ ತಲುಪಿಸಿದರು. ಈ ಮೂಲಕ ಪರೀಕ್ಷಾ ಉಡಾವಣೆ ಯಶಸ್ವಿಯಾಯಿತು.
ಧ್ವನಿಗಿಂತ ೧.೨ ಪಟ್ಟು ಹೆಚ್ಚು ವೇಗದಲ್ಲಿ ಚಲಿಸಿದ ನೌಕೆ
ಸಾಧಾರಣ ವಾತಾವರಣದಲ್ಲಿ ಧ್ವನಿಯ ವೇಗ ಸೆಕೆಂಡಿಗೆ ೩೪೩ ಮೀಟರ್ ಆಗಿದ್ದು, ಇದಕ್ಕಿಂತ ೧.೨ ಪಟ್ಟು ಹೆಚ್ಚು ವೇಗದಲ್ಲಿ ರಾಕೆಟ್ ಟಿ.ವಿ ಡಿ-೧ ಸಹಕಾರದಿಂದ ಆಗಸದೆತ್ತರಕ್ಕೆ ಹಾರಿದ ಕ್ರೂ ಮಾಡ್ಯೂಲ್ ಉಡಾವಣೆಗೊಂಡು ೬೧ ಸೆಕೆಂಡುಗಳ ಬಳಿಕ ೧೧.೯ ಕಿ.ಮೀ ಎತ್ತರ ತಲುಪಿತು. ಬಳಿಕ ತುರ್ತು ಪರಿಸ್ಥಿತಿಯನ್ನು ಅಣಕಿಸುವ ಹಾಗೆ ರಾಕೆಟ್ನಿಂದ ಬೇರ್ಪಟ್ಟ ಕ್ರೂ ಮಾಡ್ಯೂಲ್ ಸುಮಾರು ೧೦ ನಿಮಿಷಗಳ ಬಳಿಕ ೩ ಬೃಹತ್ ಗಾತ್ರದ ಪ್ಯಾರಶೂಟ್ಗಳ ಸಹಕಾರದಿಂದ ಬಂಗಾಳಕೊಲ್ಲಿಯಲ್ಲಿ ಸುರಕ್ಷಿತವಾಗಿ ಇಳಿಯಿತು. ಇಲ್ಲಿಂದ ಕ್ರೂ ಮಾಡ್ಯೂಲ್ಅನ್ನು ಭಾರತೀಯ ನೌಕಾಪಡೆಯ ಹಡಗಿನಲ್ಲಿ ಕರಾವಳಿಗೆ ಸಾಗಿಸಲಾಯಿತು. ನೈಜ ಉಡಾವಣೆ ಸಂದರ್ಭ ಕ್ರೂ ಮಾಡ್ಯೂಲ್ನಲ್ಲಿ ಭಾರತೀಯ ವಾಯುಪಡೆಯ ಪೈಲೆಟ್ಗಳಾಗಿರುವ ಒಟ್ಟು ೪ ಗಗನಯಾತ್ರಿಕರು ಇರಲಿದ್ದಾರೆ.
ಎಲ್ಲ ಅಡೆತಡೆಗಳು ಎದುರಿಸಲು ಸಿದ್ಧ - ಸೋಮನಾಥ್
ಗಗನಯಾನ ಯಶಸ್ವಿ ಪರೀಕ್ಷಾ ಉಡಾವಣೆ ಬಳಿಕ ಮಾಹಿತಿ ನೀಡಿದ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು, ಪರೀಕ್ಷಾ ಉಡಾವಣೆಗೆ ಸಹಕಾರಿಯಾದ ಸರ್ವರ ಶ್ರಮವನ್ನೂ ಶ್ಲಾಘಿಸಿದರು. ನೈಜವಾಗಿ ೨೦೨೫ ರಲ್ಲಿ ಗಗನಯಾತ್ರಿಕರನ್ನು ಹೊತ್ತೊಯ್ಯುವ ಕ್ರೂ ಮಾಡ್ಯೂಲ್ಅನ್ನು ತುರ್ತು ಪರಿಸ್ಥಿತಿ ಸಂದರ್ಭ ಸುರಕ್ಷಿತವಾಗಿಸುವ ಸಾಮರ್ಥ್ಯವನ್ನು ಇಂದು ಪ್ರದರ್ಶಿಸಿದ್ದೇವೆ. ಇಂದಿನ ಉಡಾವಣೆಯು ಪ್ರತಿಕೂಲ ಹವಾಮಾನ ಹಾಗೂ ಕೆಲ ತಾಂತ್ರಿಕ ದೋಷವನ್ನು ಮೆಟ್ಟಿ ನಿಂತು ಯಶಸ್ಸು ಕಂಡಿದೆ. ಯಾವುದೇ ರೀತಿಯ ಅಡೆತಡೆಗಳು ಬಂದರೂ ಅದನ್ನು ಮೀರಿ ಯೋಜನೆಯನ್ನು ಯಶಸ್ವಿಗೊಳಿಸುವ ಇಸ್ರೋದ ಸಾಮರ್ಥ್ಯ ಇಂದು ಸಾಬೀತಾಗಿದೆ ಎಂದರು. ಯೋಜನಾ ನಿರ್ದೇಶಕ ಶಿವಕುಮಾರ್, ಕ್ರೂ ಎಸ್ಕೇಪ್ ಸಿಸ್ಟಮ್ನ ಪ್ರಮುಖ ಸುನಿಲ್ ಸೇರಿದಂತೆ ಇತರರು ಇಂದಿನ ಉಡಾವಣೆ ಹಾಗೂ ಗಗನಯಾನ ಯೋಜನೆಯ ಬಗ್ಗೆ ಮಾಹಿತಿ ಇತ್ತರು.