ಮಡಿಕೇರಿ, ಅ. ೨೦: ಮಡಿಕೇರಿ ನಗರ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಸ ನಿರ್ವಹಣೆ ಮಾಡಬೇಕೆಂದು ಅಲ್ಲಾರಂಡ ರಂಗಚಾವಡಿ ಜಿಲ್ಲಾಡಳಿತ, ಜನಪ್ರತಿನಿಧಿಗಳನ್ನು ಒತ್ತಾಯಿಸಿದೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರಂಗಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ ಅವರು, ಮಡಿಕೇರಿಯಲ್ಲಿರುವ ಕಸ ಮರುಪರಿಷ್ಕರಣೆ ಘಟಕ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಘಟಕ ನಿರ್ಮಾಣದೊಂದಿಗೆ ಸಾರ್ವಜನಿಕವಾಗಿ ಕಸ ನಿರ್ವಹಣೆ ಮಾಡಬೇಕು. ಗ್ರಾಮ ಪಂಚಾಯಿತಿಗಳಲ್ಲೂ ಇದೇ ರೀತಿ ವ್ಯವಸ್ಥೆ ಆಗಬೇಕು. ಜಿಲ್ಲಾಡಳಿತ, ಶಾಸಕರು ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಹೇಳಿದರು. ಎಲ್ಲೆಡೆ ಕಸದ ರಾಶಿಗಳು ತುಂಬಿರುವುದರಿAದ ರೋಗ - ರುಜಿನಗಳು ಹರಡುವ ಸಾಧ್ಯತೆಯಿದೆ. ದಸರಾ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಕಸ ಹಾಕದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಶುಚಿತ್ವ ಕಾಪಾಡಬೇಕು. ಬೀದಿ ಬದಿ ವ್ಯಾಪಾರಿಗಳಿಗೂ, ಪ್ರವಾಸಿಗರಿಗೂ, ಹೋಂಸ್ಟೇಗಳಲ್ಲೂ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಗೌಡಂಡ ಪಟ್ಟು ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಕಸದ ಸಮಸ್ಯೆ ಕೆಟ್ಟದಾಗಿದೆ. ಕೊರೊನಾ ಬಂದರೂ ಇನ್ನೂ ಜನರು ಎಚ್ಚೆತ್ತುಕೊಂಡಿಲ್ಲ. ಹೀಗೇ ಮುಂದುವರಿದರೆ ಸಾಂಕ್ರಾಮಿಕ ರೋಗ ಹರಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು. ಜಿಲ್ಲೆಯ ಶಾಸಕರುಗಳು ಈ ಬಗ್ಗೆ ಗಮನಹರಿಸಿ ಎಲ್ಲಾ ಪಟ್ಟಣಗಳಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.