ಮಡಿಕೇರಿ, ಅ. ೨೦: ರಾಜ್ಯ ಕೆಎಸ್‌ಆರ್‌ಪಿ ವಿಭಾಗದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ ಇಂದು ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ಕಚೇರಿಯ ಪರಿವೀಕ್ಷಣೆ ನಡೆಸಿದರು.

ಪೊಲೀಸ್ ಕವಾಯತು ಪರಿವೀಕ್ಷಣೆ ನಡೆಸಿ, ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರಗಳನ್ನು ನೀಡಿದರು.

ಅಪರಾಧ ತಡೆ ಹಾಗೂ ವಿಶೇಷವಾಗಿ ಮಾದಕ ವಸ್ತು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರು ಮಾಡಿರುವ ಕಾರ್ಯವನ್ನು ಶ್ಲಾಘಿಸಿದ ಸಂದೀಪ್ ಪಾಟೀಲ, ಆತಿಥ್ಯ ಕೇಂದ್ರಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದರು. ಪೊಲೀಸ್ ಇಲಾಖೆ ಸೇವೆ ಬಯಸಿ ಬರುವ ಜನರನ್ನು ಸೌಜನ್ಯದಿಂದ ಕಾಣಬೇಕೆಂದು ಸಲಹೆ ನೀಡಿದರು.

ಬಳಿಕ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಅಪರಾಧ ಪರಾಮರ್ಶನ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ವಲಯದ ಡಿಐಜಿಪಿ ಡಾ. ಎಂ.ಬಿ.ಬೋರಲಿAಗಯ್ಯ, ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್.ಸುಂದರ್ ರಾಜ್, ಕೆಎಸ್ಪಿಎಸ್ ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.