ಐಗೂರು, ಅ. ೧೯: ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ "ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ" ಅಭಿಯಾನದ ಅಂಗವಾಗಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಗ್ರಾಮದ ಹಾಡಿಗಳು ಮತ್ತು ವೈಯಕ್ತಿಕ ಮನೆಗಳಿಗೆ ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ಉದ್ಯೋಗ ಖಾತ್ರಿ ಯೋಜನೆಯಡಿ ಸಾರ್ವಜನಿಕ ಕಾಮಗಾರಿಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲಾಯಿತು. ಒಟ್ಟು ೨೩ ಕಾಮಗಾರಿಗಳ ಪಟ್ಟಿಯನ್ನು ಜನರಿಂದಲೇ ಪಡೆಯಲಾಯಿತು. ಈ ಭಾಗದ ಜನರ ಸಮಸ್ಯೆಗಳನ್ನು ಜನರಿಂದಲೇ ಕೇಳಿ ತಿಳಿದು ಅವರ ಜೊತೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಪಿಡಿಓ ಮತ್ತು ಪಂಚಾಯಿತಿ ಸಿಬ್ಬಂದಿಗಳಿಗೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಯಣ್ಣ ಅವರು ನಿರ್ದೇಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ರಾಕೇಶ್, ಉದ್ಯೋಗ ಖಾತ್ರಿ ತಾಂತ್ರಿಕ ಸಂಯೋಜಕರಾದ ರಂಜಿತ್, ಶ್ರೀಕಾಂತ್, ಹೌಸಿಂಗ್ ನೋಡಲ್ ಅಧಿಕಾರಿ ಭಾನುಪ್ರಕಾಶ್, ಪಿಡಿಓ ಬಾಲಕೃಷ್ಣ ರೈ ಉಪಾಧ್ಯಕ್ಷೆ ಗೌರಮ್ಮ ಭಾಗವಹಿಸಿದ್ದರು.