ಶನಿವಾರಸಂತೆ. ಅ. ೧೮: ಸಮೀಪದ ಕೊಡ್ಲಿಪೇಟೆಯ ಶ್ರೀರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಸ್ಥಾನ ಸಮಿತಿ ವತಿಯಿಂದ ಶರನ್ನವರಾತ್ರಿ ಪ್ರಯುಕ್ತ ಅ.೧೫ ರಿಂದ ೨೪ ರವರೆಗೆ ೧೦ ದಿನಗಳ ಕಾಲ ದುರ್ಗಾ ಪೂಜೆ ಹಾಗೂ ವಿವಿಧ ಸೇವಾರಾಧನೆಗಳು ನಡೆಯಲಿವೆ.

ಭಾನುವಾರ ಬೆಳಿಗ್ಗೆ ದೇವಾಲಯದಲ್ಲಿ ಪ್ರಥಮ ದಿನ ದುರ್ಗೆಯ ಪ್ರಥಮ ಸ್ವರೂಪ ಶ್ರೀಶೈಲ ಪುತ್ರಿಯ ಆರಾಧನೆ ನಡೆದು, ವ್ರತಸಂಕಲ್ಪ, ಅಖಂಡ ನಂದಾದೀಪ ಸ್ಥಾಪನೆ, ಧ್ವಜ ಸ್ಥಾಪನೆ, ದುರ್ಗಾಕಲಶ ಸ್ಥಾಪನಾ ವಿಧಿ ನೆರವೇರಿತು. ಸಂಜೆ ೬ ಗಂಟೆಗೆ ಬಿಂಬಶುದ್ಧಿ, ಸಾಮೂಹಿಕ ಅಭಿಷೇಕ, ದುರ್ಗಾಪೂಜಾ ವಿಧಿ, ಸಾಮೂಹಿಕ ಪ್ರಾರ್ಥನೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.

ಶ್ರೀ ಕ್ಷೇತ್ರದ ಅರ್ಚಕ ಮಹಾಬಲೇಶ್ವರ ಜೋಷಿ ಪೂಜಾ ಕೈಂಕರ್ಯ ನೆರವೇರಿಸಿದರು. ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.