ಮಡಿಕೇರಿ, ಅ. ೧೮: ಕೇಂದ್ರ ಸರ್ಕಾರದ ಕಾರ್ಮಿಕ ಉದ್ಯೋಗ ಮಂತ್ರಾಲಯವು ಅಸಂಘಟಿತ ಕಾರ್ಮಿಕ ಸಮಗ್ರ ರಾಷ್ಟಿçÃಯ ದತ್ತಾಂಶ ಕ್ರೋಢೀಕರಿಸುವ ಉದ್ದೇಶದಿಂದ ೩೭೯ ವರ್ಗಗಳ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಪೋರ್ಟಲ್ ಮೂಲಕ ೨೬ ಆಗಸ್ಟ್ ೨೦೨೧ ರಿಂದ ನೋಂದಾಯಿಸಲಾಗುತ್ತಿದೆ.

೨೦೨೨ ರ ಮಾರ್ಚ್ ೩೧ ರವರೆಗೆ ನೋಂದಣಿಯಾದ ಮತ್ತು ೨೦೨೨ ರ ಮಾರ್ಚ್ ೩೧ ರೊಳಗೆ ಅಪಘಾತಗೊಂಡು ಮರಣ ಹೊಂದಿದ-ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ, ಅಸಂಘಟಿತ ಕಾರ್ಮಿಕರು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ಅಪಘಾತ ಪರಿಹಾರ ಪಡೆಯಲು ಕಾರ್ಮಿಕ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬಹುದು.

ಅಗತ್ಯ ದಾಖಲೆಗಳು: ಮರಣ ಹೊಂದಿದ್ದಲ್ಲಿ, ನಾಮನಿರ್ದೇಶಿತರ ಆಧಾರ್ ಕಾರ್ಡ್, ಇ-ಶ್ರಮ್ (ಯುಎಎನ್) ಕಾರ್ಡ್, ಮರಣ ಪ್ರಮಾಣ ಪತ್ರ, ಮರಣ ಕಾರಣದ ವೈದ್ಯಕೀಯ ಪ್ರಮಾಣ ಪತ್ರ, ಎಫ್.ಐ.ಆರ್., ಮರಣೋತ್ತರ ಪರೀಕ್ಷೆಯ ವರದಿ, ಫಲಾನುಭವಿಯು ಅಪ್ರಾಪ್ತ ವಯಸ್ಕರಾಗಿದ್ದಲ್ಲಿ, ಜಿಲ್ಲಾ ನ್ಯಾಯಾಲಯವು ನೀಡಿದ ಪಾಲಕನ ಅಧಿಕಾರ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು.

ಶಾಶ್ವತ ದುರ್ಬಲತೆ ಅಥವಾ ಭಾಗಶಃ ಅಂಗ ವೈಕಲ್ಯತೆಗೆ ಒಳಗಾದಲ್ಲಿ, ಅಂಗವೈಕಲ್ಯ ಪ್ರಮಾಣ ಪತ್ರ ಅಥವಾ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ನೀಡಲಾದ ಅಂಗವೈಕಲ್ಯ ಗುರುತಿನ ಚೀಟಿಯೊಂದಿಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಕಾರ್ಮಿಕ ಅಧಿಕಾರಿಯವರ ಕಚೇರಿ, ಕೊಠಡಿ ಸಂಖ್ಯೆ ೧೧, ಜಿಲ್ಲಾಡಳಿತ ಭವನ, ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕುಗಳಲ್ಲಿರುವ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೊಡಗು ಉಪ ವಿಭಾಗದ ಕಾರ್ಮಿಕ ಅಧಿಕಾರಿ ಎಸ್.ಎಲ್. ಹರ್ಷವರ್ಧನ್ ತಿಳಿಸಿದ್ದಾರೆ.