ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ರಾಜ್ಯ ಸರಕಾರದ ಗೌರವ

ಬೆಂಗಳೂರು, ಅ. ೧೮: ಪ್ರಸ್ತುತ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ನೇಮಕಾತಿಯಲ್ಲಿ ಶೇ.೩ ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಇತರ ಇಲಾಖೆಗಳಲ್ಲಿಯೂ ಶೇ.೨ ರಷ್ಟು ಮೀಸಲಾತಿ ನೀಡುವ ಕುರಿತು ಸಕಾರಾತ್ಮಕವಾಗಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಇತ್ತೀಚೆಗೆ ಚೀನಾದಲ್ಲಿ ನಡೆದ ೧೯ನೇ ಏಷ್ಯನ್ ಗೇಮ್ಸ್ನಲ್ಲಿ ಪದಕ ಪಡೆದ ರಾಜ್ಯದ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸನ್ಮಾನಿಸಿ, ನಗದು ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು. ದೇಶ ಮತ್ತು ರಾಜ್ಯದ ಗೌರವ ಹೆಚ್ಚು ಮಾಡಿದ್ದೀರಿ. ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಈ ಬಾರಿ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯಧಿಕ ಪದಕಗಳನ್ನು ಗೆದ್ದಿದ್ದಾರೆ. ಕಳೆದ ಬಾರಿ ೭೦, ಈ ಬಾರಿ ೧೦೭ ಪದಕ ಗೆದ್ದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಡೀ ಜಗತ್ತಿನಲ್ಲಿ ಜನಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಏಷ್ಯನ್ ಗೇಮ್ಸ್ನಲ್ಲಿಯೂ ಮೊದಲ-ಎರಡನೇ ಸ್ಥಾನ ಬಂದರೆ ಗೌರವ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇಸ್ರೇಲ್‌ಗೆ ಬೈಡನ್ ಬೆಂಬಲ

ಟೆಲ್‌ಅವಿವ್, ಅ. ೧೮: ತನ್ನ ವಿರುದ್ಧ ದಾಳಿ ನಡೆಸಿದ ಹಮಾಸ್ ಉಗ್ರರ ವಿರುದ್ಧ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್‌ಗೆ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಭೇಟಿ ನೀಡಿದ್ದು, ಅಮೇರಿಕಾ ಯಹೂದಿಗಳ ಬೆಂಬಲಕ್ಕೆ ನಿಂತಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಜೋ ಬೈಡನ್ ಇಸ್ರೇಲ್ ಭೇಟಿ ವೇಳೆ ಗಾಜಾ ಪಟ್ಟಿಯಲ್ಲಿ ಆಸ್ಪತ್ರೆಯೊಂದು ಸ್ಫೋಟಗೊಂಡಿದ್ದು, ಈ ಬೆನ್ನಲ್ಲೇ ಹೇಳಿಕೆ ನೀಡಿರುವ ಅಮೇರಿಕಾ ಅಧ್ಯಕ್ಷ, ಈ ಕೃತ್ಯ ನಡೆಸಿರುವುದು ಇಸ್ರೇಲಿ ಸೇನೆಯಲ್ಲ, ಆದರೆ ಮತ್ತೊಂದು ತಂಡದಿAದ ಈ ಸ್ಫೋಟ ನಡೆದಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ. ಇಸ್ರೇಲ್ ಪ್ರಧಾನಿಯೊಂದಿಗೆ ಮಾತನಾಡಿದ ವೇಳೆ ಈ ಸ್ಫೋಟದ ಬಗ್ಗೆ ಉಲ್ಲೇಖಿಸಿರುವ ಜೋ ಬೈಡನ್, ನಾನು ಗಮನಿಸಿರುವ ಪ್ರಕಾರ, ನೀವು ಈ ಕೃತ್ಯ ಎಸಗಿಲ್ಲ. ಆದರೆ ಬೇರೆ ತಂಡ ಇದನ್ನು ನಡೆಸಿದೆ ಎಂದು ಹೇಳಿದ್ದು ಭಯೋತ್ಪಾದಕ ಹಮಾಸ್‌ನ್ನು ಉಲ್ಲೇಖಿಸಿದ್ದಾರೆ. ಇದೇ ವೇಳೆ ಅಲ್ಲಿನ ಹಲವು ಮಂದಿಗೆ ಸ್ಫೋಟಕ್ಕೆ ಕಾರಣ ಏನೆಂದು ನಿಖರವಾಗಿ ತಿಳಿದಿಲ್ಲ ಎಂದೂ ಬೈಡನ್ ಹೇಳಿದ್ದಾರೆ. ಇಸ್ರೇಲ್ ಮೇಲೆ ಹಠಾತ್ ದಾಳಿ ಮಾಡಿ ವಿದೇಶಿಗರು ಸೇರಿದಂತೆ ೧,೪೦೦ಕ್ಕೂ ಹೆಚ್ಚು ಇಸ್ರೇಲಿಗರನ್ನು ಹತ್ಯೆ ಮಾಡಿ ನೂರಾರು ಜನರು ಅಪಹರಿಸಿರುವುದಕ್ಕೆ ೧೦ ಹಮಾಸ್ ಸದಸ್ಯರ ಗುಂಪು ಮತ್ತು ಗಾಜಾ, ಸುಡಾನ್, ಟರ್ಕಿ, ಅಲ್ಜೀರಿಯಾ ಮತ್ತು ಕತಾರ್‌ನಾದ್ಯಂತ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಸಂಘಟನೆಯ ಹಣಕಾಸು ಜಾಲದ ವಿರುದ್ಧ ಅಮೆರಿಕವು ನಿರ್ಬಂಧಗಳನ್ನು ಘೋಷಿಸಿದೆ.

ಕೇಂದ್ರ ನೌಕರರು, ಪಿಂಚಣಿದಾರರಿಗೆ ತುಟ್ಟಿಭತ್ಯೆ

ನವದೆಹಲಿ, ಅ. ೧೮: ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಮೋದಿ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಕೇಂದ್ರ ಸಚಿವ ಸಂಪುಟವು ನೌಕರರ ತುಟ್ಟಿಭತ್ಯೆ(ಡಿಎ)ಯಲ್ಲಿ ನಾಲ್ಕು ಪ್ರತಿಶತ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಭತ್ಯೆ ಹೆಚ್ಚಳದ ನಂತರ ನೌಕರರ ಡಿಎ ಶೇ. ೪೨ರಿಂದ ೪೬ಕ್ಕೆ ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಸಂಬAಧ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಹೆಚ್ಚಿದ ಡಿಎ ಜುಲೈ ೧ರಿಂದ ಅನ್ವಯವಾಗಲಿದೆ. ಇದರಿಂದ ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳ ಡಿಎಯನ್ನು ವರ್ಷಕ್ಕೆ ಎರಡು ಬಾರಿ ಬದಲಾಯಿಸುತ್ತದೆ. ಇದಕ್ಕೂ ಮುನ್ನ ಜನವರಿಯಿಂದ ಡಿಎಯನ್ನು ಶೇಕಡಾ ನಾಲ್ಕು ರಷ್ಟು ಹೆಚ್ಚಿಸಲಾಗಿತ್ತು. ಅಲ್ಲದೆ, ರೈಲ್ವೆ ಉದ್ಯೋಗಿಗಳಿಗೆ ೭೮ ದಿನಗಳ ಕಾರ್ಯಕ್ಷಮತೆ ಸಂಬAಧಿತ ಬೋನಸ್ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ರೂ. ೧,೯೬೯ ಕೋಟಿ ಇದರಿಂದ ೧೧ ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರಿಗೆ ಅನುಕೂಲವಾಗಲಿದೆ. ಏಳನೇ ವೇತನ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ಕೇಂದ್ರ ನೌಕರರ ಡಿಎ ಹೆಚ್ಚಳ ಮಾಡಲಾಗಿದೆ. ಇದರಿಂದ ೪೮.೬೭ ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ೬೭.೯೫ ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಡಿಎ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ರೂ. ೧೨,೮೫೭ ಕೋಟಿ ಹೊರೆ ಬೀಳಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ನಂತರ ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರಿನಲ್ಲಿ ಅಗ್ನಿ ದುರಂತ

ಬೆAಗಳೂರು, ಅ. ೧೮: ರಾಜಧಾನಿ ಬೆಂಗಳೂರಿನಲ್ಲಿ ಇಂದು ಬುಧವಾರ ಅಗ್ನಿದುರಂತ ಸಂಭವಿಸಿದೆ. ಕೋರಮಂಗಲ ಸಮೀಪದ ತಾವರಕೆರೆ ಮುಖ್ಯರಸ್ತೆಯಲ್ಲಿರುವ ಪಬ್‌ವೊಂದರಲ್ಲಿ ಸಿಲಿಂಡರ್ ಸ್ಫೋಟದಿಂದ ಅಗ್ನಿ ದುರಂತ ಸಂಭವಿಸಿದ್ದು, ಕಟ್ಟಡದ ನಾಲ್ಕನೇ ಮಹಡಿ ಸಂಪೂರ್ಣ ಹೊತ್ತಿ ಉರಿದಿದೆ. ಬೆಂಕಿಯಿAದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬರು ಟೆರೇಸ್‌ನಿಂದ ಜಿಗಿದಿದ್ದಾರೆ. ಅವರು ಮತ್ತು ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡದ ಮೇಲಿನ ಮಹಡಿಯಲ್ಲಿ ಹಲವಾರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಂಗ್ರಹಿಸಲಾಗಿದ್ದ ‘ಹುಕ್ಕಾ ಬಾರ್ ಮತ್ತು ಕೆಫೆ'ಯಲ್ಲಿ ಮಧ್ಯಾಹ್ನದ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಸುತ್ತಮುತ್ತಲಿನ ಜನರು ಸ್ಫೋಟದಂತಹ ಶಬ್ದಗಳನ್ನು ಕೇಳಿದರು. ನಾವು ಎಂಟು ಅಗ್ನಿಶಾಮಕ ದಳ ತಂಡಗಳನ್ನು ಸ್ಥಳಕ್ಕೆ ಕಳುಹಿಸಿದ್ದೇವೆ ಮತ್ತು ನಮ್ಮ ಹಿರಿಯ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದಾರೆ. ಬೆಂಕಿಯನ್ನು ನಂದಿಸಲಾಗಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಜಾ ಆಸ್ಪತ್ರೆ ಮೇಲೆ ದಾಳಿ-ಮೋದಿ ಖಂಡನೆ

ನವದೆಹಲಿ, ಅ. ೧೮: ಗಾಜಾ ಆಸ್ಪತ್ರೆ ಮೇಲೆ ನಡೆದ ಅಮಾನುಷ ದಾಳಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರವಾಗಿ ಖಂಡಿಸಿದ್ದು, ಭಾಗಿಯಾದವರು ಹೊಣೆ ಹೊರಬೇಕು ಎಂದು ಬುಧವಾರ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಟ್ವೀಟ್ ಮಾಡಿರುವ ಅವರು, ಸಂಘರ್ಷದಲ್ಲಿ ನಾಗರೀಕರ ಸಾವು-ನೋವುಗಳು ಕಳವಳಕಾರಿ ವಿಚಾರವಾಗಿದೆ. ದಾಳಿಯಲ್ಲಿ ಭಾಗಿಯಾದವರು ಹೊಣೆ ಹೊರಬೇಕು ಎಂದು ಹೇಳಿದ್ದಾರೆ. ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದಲ್ಲಿ ಜೀವಹಾನಿಯ ಬಗ್ಗೆ ತೀವ್ರ ಆಘಾತವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ಸಂತಾಪಗಳನ್ನು ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ತಿಳಿಸಿದ್ದಾರೆ.

ಶಾಸಕ ಸುನಿಲ್ ಕುಮಾರ್ ವಿರುದ್ಧ ಮುತಾಲಿಕ್ ವಾಗ್ದಾಳಿ

ಉಡುಪಿ, ಅ. ೧೮: ಕಾರ್ಕಳ ಕ್ಷೇತ್ರದ ಬೈಲೂರಿನ ಥೀಮ್ ಪಾರ್ಕ್ನಲ್ಲಿ ಅಪೂರ್ಣ ಪ್ರತಿಮೆ ಸ್ಥಾಪಿಸುವ ಮೂಲಕ ಪರಶುರಾಮ ದೇವರಿಗೆ ಅವಮಾನ ಮಾಡಲಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಂಗಳವಾರ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಪರಶುರಾಮನ ಪ್ರತಿಮೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಕ್ಟೋಬರ್ ೧೪ ರಂದು ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರವು ಪ್ರತಿಮೆಯ ಮೇಲಿನ ಅರ್ಧ ಭಾಗವನ್ನು ತೆರವುಗೊಳಿಸಿದೆ. ಮೂಲ ವಿನ್ಯಾಸದ ಮಾನದಂಡಗಳಿಗೆ ನವೀಕರಿಸಲು ಪ್ರತಿಮೆಯನ್ನು ಮೂಲತಃ ತಯಾರಿಸಿದ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಪ್ರಮೋದ್ ಮುತಾಲಿಕ್, ತುಳುನಾಡಿನ ಸೃಷ್ಟಿಕರ್ತ ಎಂದು ನಂಬಲಾದ ಪರಶುರಾಮನಿಗೆ ಪ್ರತಿಷ್ಠಾಪನೆ ವೇಳೆ ಸಚಿವರಾಗಿದ್ದ ಸುನೀಲ್ ಕುಮಾರ್ ಅವರು ಅಪಾರ ಅವಮಾನ ಮಾಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ಅಪಖ್ಯಾತಿ ತಂದಿದ್ದು, ರಾಜೀನಾಮೆ ನೀಡಬೇಕು. ಪ್ರತಿಮೆ ನಿರ್ಮಾಣಕ್ಕೆ ಒಂದು ವರ್ಷ ಬೇಕು ಎಂದು ಎಂಜಿನಿಯರ್‌ಗಳು ಹೇಳಿದ್ದರೂ, ೪೧ ದಿನಗಳಲ್ಲಿ ಎಲ್ಲವನ್ನೂ ಪೂರ್ಣಗೊಳಿಸಲಾಗಿದೆ. ಕಾರ್ಕಳ ತಾಲೂಕಿನ ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮತ್ತು ಪ್ರತಿಮೆ ಸ್ಥಾಪನೆಗೆ ಅನುಮತಿಯನ್ನೂ ಪಡೆದಿಲ್ಲ ಎಂದು ಆರೋಪಿಸಿದರು.