ಮಡಿಕೇರಿ, ಅ. ೧೮: ವಿಶಿಷ್ಟ ಆಚರಣೆ ಮೂಲಕ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಬೇಡು ಹಬ್ಬ ಕೂಡ ತನ್ನದೇ ಆದ ಐತಿಹ್ಯವನ್ನು ಹೊಂದಿದೆ. ಜಿಲ್ಲೆಯ ವಿವಿಧೆಡೆ ಈ ಆಚರಣೆ ರೂಢಿಯಲ್ಲಿದೆ. ಇದೀಗ ಜಿಲ್ಲೆಯ ಮೊದಲ ಬೇಡು ಹಬ್ಬ ಕುಂದಬೆಟ್ಟದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯುವ ಮೂಲಕ ಹಬ್ಬದ ವೈಭವ ದಲ್ಲಿ ಭಕ್ತಾದಿಗಳು ಸಂಭ್ರಮಿಸಿದರು.
ಕುಂದತ್ ಬೊಟ್ಟ್'ಲ್ ನೇಂದಾ ಕುದುರೆ... ಪಾರಣಮಾನಿಲ್ ಅಳ್ಂಜ ಕುದುರೆ... ಎಂಬ ಬೇಡುಹಬ್ಬದ ಹಾಡಿನ ಸಾಲಿನಲ್ಲಿಯೇ ಅಡಕವಾ ಗಿರುವ ಇತಿಹಾಸ ಪ್ರಸಿದ್ಧದ ಬೊಟ್ಟ್'ಲಪ್ಪ (ಈಶ್ವರ) ದೇವರ ವಾರ್ಷಿಕ ಬೋಡ್ ನಮ್ಮೆ ತಾ. ೧೭ ಹಾಗೂ ೧೮ರಂದು ಪೊನ್ನಂಪೇಟೆ ತಾಲೂಕಿನ ಬೊಟ್ಟಿಯತ್ನಾಡ್ ಕುಂದ ಮುಗುಟಗೇರಿ ಗ್ರಾಮದಲ್ಲಿ ನಡೆಯಿತು.
ವರ್ಷಂಪ್ರತಿ ಕಾವೇರಿ ತೀರ್ಥೋ ದ್ಭವದ ದಿನದಂದು ನಡೆಯುವ ಬೊಟ್ಟಿಯತ್ ನಾಡ್ ಕುಂದ ಮುಗು ಟಿಗೇರಿ ಗ್ರಾಮದ ಈ ಬೇಡು ಹಬ್ಬದಲ್ಲಿ ತಲಕಾವೇರಿಯಿಂದ ಪವಿತ್ರ ತೀರ್ಥವನ್ನು ತಂದು ಕುಂದಬೆಟ್ಟದ ಮೇಲಿರುವ ಈಶ್ವರ ದೇವರಿಗೆ ಅರ್ಪಿಸುವ ಮೂಲಕ ಕೊಡಗಿನ ಮೊದಲ ಬೋಡ್ ನಮ್ಮೆಗೆ ಚಾಲನೆ ನೀಡಲಾಯಿತು. ವರ್ಷಂಪ್ರತಿ ತೀರ್ಥೋದ್ಭವಕ್ಕೆ ಒಂದು ದಿನ ಮುಂಚೆ ಹಾಗೂ ತೀರ್ಥೋದ್ಭವದ ಮರುದಿನ ಇಲ್ಲಿ ಹಬ್ಬ ನಡೆಯಲಿದ್ದು ಈ ಬಾರಿ ತೀರ್ಥೋದ್ಭವ ತಾ. ೧೭ರ ಮಧ್ಯರಾತ್ರಿಯ ನಂತರ ಹಾಗೂ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ತಾ. ೧೮ನೇ ತಾರೀಖಿನ ಮುಂಜಾನೆ ೦೧-೨೭ಕ್ಕೆ ಆಗಿರುವ ಕಾರಣ ಕುಂದ ಬೋಡ್ ನಮ್ಮೆ ಅ. ೧೭ ಹಾಗೂ ೧೮ರಂದು ನಡೆಯಿತು.
ತಾ. ೧೭ರಂದು ರಾತ್ರಿ ಇಲ್ಲಿನ ಅಂಬಲ ಹಾಗೂ ಈಶ್ವರ ದೇವಸ್ಥಾನ ದಲ್ಲಿ ಕಳಿ ಪೊರಡುವೋ ಆಚರಣೆ ಬಳಿಕ ೧೮ರಂದು ಮಧ್ಯಾಹ್ನ ಮನೆಯ ಪಂಡ ಹಾಗೂ ಸಣ್ಣುವಂಡ ಕುಟುಂಬ ಸ್ಥರ ಬಲ್ಯಮನೆಯಿಂದ ಕೃತಕವಾಗಿ ಶೃಂಗರಿಸಲಾದ ಎರಡು ಕುದುರೆಗಳು ಹೊರಟು ನಂತರ ಅಂಬಲದಲ್ಲಿ ಸೇರಿ ಕಡಿದಾದ ದಾರಿಯ ಮೂಲಕ ಬೆಟ್ಟ ವನ್ನು ಏರಿ, ಕುಂದಬೆಟ್ಟದ ಮೇಲಿನ ಈಶ್ವರ ದೇವಸ್ಥಾನದಲ್ಲಿ ಹಬ್ಬವನ್ನು ಅದ್ಧೂರಿಯಿಂದ ಆಚರಿಸಿದರು.