ಸುಂಟಿಕೊಪ್ಪ,ಅ.೧೮: ಸುಂಟಿಕೊಪ್ಪ ಪಟ್ಟಣದ ಮಾದಾಪುರ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯ ಪುನರ್ ನಿರ್ಮಾಣ ಹಾಗೂ ಅಭಿವೃದ್ಧಿ ಕೆಲಸಗಳ ಬಗ್ಗೆ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಚರ್ಚೆ ನಡೆಯಿತು.

ಈ ವೇಳೆ ಮಾತನಾಡಿದ ಹಿರಿಯ ಮುಖಂಡ ಡಿ.ನರಸಿಂಹ ಅವರು, ಕಳೆದ ೨೫ ವರ್ಷಗಳ ಹಿಂದೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ನೀಡಿದಂತಹ ಸಿಲಿಕಾನ್ ಛೇಂಬರ್ ಇದೀಗ ಹಾಳಾಗಿದೆ. ಈ ಬಗ್ಗೆ ಧರ್ಮಸ್ಥಳ ಸಂಘದ ಮುಖ್ಯ ಅಧಿಕಾರಿಗಳೊಂದಿಗೆ ಮಾತನಾಡಿ ಮನವಿ ನೀಡಲಾಗಿದ್ದು, ಅದಕ್ಕೆ ಸ್ಪಂದಿಸಿ ಧರ್ಮಾಧಿಕಾರಿಗಳು ಅಂದಾಜು ರೂ.೨.೫೦ ಲಕ್ಷ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಅದರಲ್ಲಿ ಶವಸಂಸ್ಕಾರದ ಸಿಲಿಕಾನ್ ಚೇಂಬರ್ ಹಾಗೂ ಸೌದೆ ಸಂಗ್ರಹದ ಕೊಠಡಿ ನಿರ್ಮಾಣ ಮಾಡಲು ಸೂಚಿಸಿದ್ದಾರೆ ಎಂದರು.

ಉದ್ಯಮಿ ಶಾಂತರಾಮ್ ಕಾಮತ್ ಮಾತನಾಡಿ, ಹಿಂದೂ ರುದ್ರಭೂಮಿಯ ಅಭಿವೃದ್ಧಿ ಕಾರ್ಯಕ್ಕೆ ಧರ್ಮಸ್ಥಳ ಸಂಘ ಮತ್ತು ಲಯನ್ಸ್ ಸಂಸ್ಥೆಯು ಮುಂದೆ ಬಂದಿದ್ದು, ಅದರೊಂದಿಗೆ ಸಾರ್ವಜನಿಕರು ಕೂಡ ಈ ಬಗ್ಗೆ ಕೈ ಜೋಡಿಸಬೇಕು. ಎಂಜಿನಿಯರ್ ಅವರಿಂದ ನಕ್ಷೆಯನ್ನು ಕೂಡ ತಯಾರಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಮಾತನಾಡಿ, ಸ್ಮಶಾನದ ಕೆಳಭಾಗದಲ್ಲಿ ಬಹಳಷ್ಟು ಮನೆಗಳಿದ್ದು, ತಡೆಗೋಡೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಮನೆಗಳ ಮೇಲೆ ಮಣ್ಣು ಬೀಳುತ್ತಿದೆ. ಈ ಬಗ್ಗೆ ಹಿಂದಿನ ಶಾಸಕರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಲಾಗಿತ್ತು. ಆದರೆ ಸಣ್ಣ ಪುಟ್ಟ ಕಾಮಗಾರಿಯ ನಂತರ ಅನುದಾನ ಬಿಡುಗಡೆಗೆ ಸರ್ಕಾರ ತಡೆಹಿಡಿದಿದ್ದರಿಂದ ಕೆಲಸಗಳು ಸ್ಥಗಿತಗೊಂಡಿದೆ. ದಸರಾದ ನಂತರ ಆ ಸ್ಥಳವನ್ನು ಜೆಸಿಬಿ ಮೂಲಕ ಸಮತಟ್ಟು ಮಾಡಿ ನಂತರ ಧರ್ಮಾಧಿಕಾರಿಗಳನ್ನು ಭೇಟಿ ಮಾಡಲು ನಿಯೋಗ ತೆರಳುವಂತೆ ತಿಳಿಸಿದರು.

ಲಯನ್ಸ್ ಸಂಸ್ಥೆಯ ಪ್ರೀತಂ ಪ್ರಭಾಕರ್ ಅವರು, ಮೇಲ್ಛಾವಣಿಗೆ ಆಗುವ ಖರ್ಚಿನ ಹಣವನ್ನು ಸಂಸ್ಥೆಯ ಮೂಲಕ ಚರ್ಚಿಸಿ ಕೊಡುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಅಂತ್ಯಕ್ರಿಯೆಗೆ ಗ್ಯಾಸ್ ಚೇಂಬರ್, ಸ್ನಾನದ ಕೊಠಡಿ, ಇಂಟರ್ ಲಾಕ್ ಅಳವಡಿಕೆ, ನೀರು, ವಿದ್ಯುತ್ ಸಂಪರ್ಕದ ಅಭಿವೃದ್ಧಿ ಬಗ್ಗೆ ಮುಖಂಡರಾದ ವಿ.ಎ.ಸಂತೋಷ್, ದಿನು ದೇವಯ್ಯ, ಬಿ.ಕೆ.ಮೋಹನ ಸಲಹೆ ನೀಡಿದರು. ಇದೇ ಸಂದರ್ಭ ಹಿಂದೂ ರುದ್ರಭೂಮಿ ಜೀರ್ಣೋದ್ಧಾರ ಸಮಿತಿಯನ್ನು ರಚನೆ ಮಾಡಲಾಯಿತು.

ಅಧ್ಯಕ್ಷರಾಗಿ ಡಿ.ನರಸಿಂಹ, ಉಪಾಧ್ಯಕ್ಷರಾಗಿ ಪಿ.ಆರ್.ಸುನಿಲ್ ಕುಮಾರ್, ಕಾರ್ಯದರ್ಶಿಯಾಗಿ ಪ್ರೀತಂ, ಖಜಾಂಚಿಯಾಗಿ ಶಾಂತರಾಮ್ ಕಾಮತ್, ಸಹ ಕಾರ್ಯದರ್ಶಿಯಾಗಿ ಬಿ.ಕೆ.ಪ್ರಶಾಂತ್, ಸಲಹಾ ಸಮಿತಿಯ ಸದಸ್ಯರಾಗಿ, ವಿ.ಎ.ಸಂತೋಷ್, ದಿನು ದೇವಯ್ಯ, ಬಿ.ಕೆ.ಮೋಹನ್, ಧನು ಕಾವೇರಪ್ಪ, ಅನೂಪ್, ಎಸ್.ವಿಘ್ನೇಶ್, ಶ್ರೀಧರ್ ಗದ್ದೆಹಳ್ಳ, ಸದಾಶಿವ ರೈ, ವಾಸುದೇವ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.