ಗೋಣಿಕೊಪ್ಪಲು, ಅ.೧೭ : ಗೋಣಿಕೊಪ್ಪ ದಸರಾ ಜನೋತ್ಸವದಲ್ಲಿ ಖ್ಯಾತ ಗಾಯಕ ಚಂದನ್ ಶೆಟ್ಟಿ ತಂಡದ ಸಂಗೀತ ಸಂಜೆ ನೆರೆದಿದ್ದ ಸಾವಿರಾರು ಪ್ರೇಕ್ಷಕರಿಗೆ ರಸದೌತಣ ನೀಡಿತು.
ಚಂದನ್ ಶೆಟ್ಟಿ ಹಾಡಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿತು. ಮಳೆಯನ್ನು ಲೆಕ್ಕಿಸದೇ ದಸರಾ ಜನೋತ್ಸವಕ್ಕೆ ಜನ ಸಾಗರ ಹರಿದು ಬಂದಿತ್ತು. ಕಾರ್ಯಕ್ರಮ ಕೊನೆಯವರೆಗೂ ಕ್ಷೇತ್ರದ ಶಾಸಕ ಎ.ಎಸ್ .ಪೊನ್ನಣ್ಣ, ಪತ್ನಿಯೊಂದಿಗೆ ಕಾರ್ಯಕ್ರಮ ವೀಕ್ಷಿಸಿದರು.
ಇದಕ್ಕೂ ಮುನ್ನ ನಡೆದ ರಮೇಶ್ ನಾಗರಹೊಳೆ ನೇತೃತ್ವದ ಗಿರಿಜನ ಅಭಿವೃದ್ಧಿ ಸಂಸ್ಥೆ ವತಿಯಿಂದ ಮೂಡಿಬಂದ ಸಂಗೀತ ಮತ್ತು ನೃತ್ಯ ಬುಡಕಟ್ಟು ಸಂಸ್ಕೃತಿಯನ್ನು ಅನಾವರಣಗೊಳಿಸಿತು.
ವೀರಾಜಪೇಟೆ ಜಗನ್ಮೋಹನ ನಾಟ್ಯಾಲಯ ತಂಡದ ಭರತ ನಾಟ್ಯ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು. ವೀರಾಜಪೇಟೆ ಮಲಯಾಳಿ ಸಂಘದ ಮಹಿಳೆಯರಿಂದ ನೃತ್ಯ ಮೂಡಿಬಂತು. ವೇದಿಕೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.