ಗೋಣಿಕೊಪ್ಪಲು, ಅ. ೧೬: ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ತನ್ನದೇ ಆದ ಇತಿಹಾಸವಿದ್ದು ಹಲವು ಮಹನೀಯರು ಆರಂಭಿಸಿದ ದಸರಾ ಇತ್ತೀಚಿನ ವರ್ಷಗಳಲ್ಲಿ ಮತ್ತಷ್ಟು ವೈಭವಯುತವಾಗಿ ಮುನ್ನಡೆಯುತ್ತಿದೆ. ದೇವಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಈ ನಾಡು ಸಮಗ್ರ ಅಭಿವೃದ್ದಿ ಕಾಣಲಿ ಜನೋತ್ಸವದಿಂದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗುವಂತಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎಸ್.ಎನ್. ಬೋಸರಾಜು ಹೇಳಿದರು.

ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯ ೪೫ನೇ ವರ್ಷದ ಜನೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಶಾಂತಿ, ನೆಮ್ಮದಿ ಜೊತೆಯಲ್ಲಿ ಜನರ ಅಭಿಪ್ರಾಯದಂತೆ, ಭಾವನೆಯಂತೆ ನಡೆದುಕೊಳ್ಳುವ ಮೂಲಕ ಎಲ್ಲಾ ಕಾರ್ಯಕ್ರಮಗಳಿಗೆ ಸಹಾಯ ನೀಡುವ ಮೂಲಕ ಮುಂದುವರೆಯುತ್ತಿದೆ. ಕ್ಷೇತ್ರದ ಶಾಸಕರು ಅಭಿವೃದ್ಧಿ ಜೊತೆಯಲ್ಲಿ

(ಮೊದಲ ಪುಟದಿಂದ) ಕಾರ್ಯಕ್ರಮಗಳನ್ನು ಕೂಡ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಮುಂದಿನ ಸಾಲಿನಲ್ಲಿ ದಸರಾ ಉತ್ಸವ ಮತ್ತಷ್ಟು ಉತ್ತಮವಾಗಿ ಮೂಡಿ ಬರುವಂತಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ್ಷೇತ್ರದ ಶಾಸಕ, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಗೋಣಿಕೊಪ್ಪ ದಸರಾವು ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ. ದಸರಾ ಸಮಿತಿಯ ಕೋರಿಕೆಯಂತೆ ಈ ಬಾರಿ ೬೦ ಲಕ್ಷ ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಮಡಿಕೇರಿ ದಸರಾ ಉತ್ಸವಕ್ಕೂ ಹೆಚ್ಚಿನ ಅನುದಾನ ನೀಡಿದ್ದಾರೆ. ಮುಂದೆ ನಡೆಯವ ಕಾವೇರಿ ಸಂಕ್ರಮಣಕ್ಕೂ ಸರ್ಕಾರ ಅನುದಾನ ನೀಡುವ ಮೂಲಕ ಕೊಡಗಿನ ಹಬ್ಬಗಳ ಯಶಸ್ವಿಗೆ ಸಹಕಾರ ನೀಡಿದೆ. ವೇದಿಕೆಗಳಲ್ಲಿ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ಸಿಗುವಂತಾಗಲಿ ಎಂದು ಹಾರೈಸಿದರು.

ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸರಾ ಸಮಿತಿಯ ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಪ್ರಸ್ತಾವಿಕವಾಗಿ ಮಾತನಾಡಿ ದಸರಾ ಜನೋತ್ಸವ ನಡೆದು ಬಂದ ಹಾದಿಯ ಬಗ್ಗೆ ಸಮಗ್ರ ವರದಿ ಮಂಡಿಸಿದರು.

ಸ್ಥಳೀಯ ಪ್ರಾಥಮಿಕ ಶಾಲಾ ಮೈದಾನದ ಕಾವೇರಿ ಕಲಾ ವೇದಿಕೆಯಲ್ಲಿ ಜರುಗಿದ ಸಭೆಯಲ್ಲಿ ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಬಾಲು ಜಿಲ್ಲಾಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿ ವರ್ಣಿತ್‌ನೇಗಿ, ಗ್ರಾ.ಪಂ. ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್, ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ, ಗ್ರಾ.ಪಂ. ಮಾಜಿ ಸದಸ್ಯ ಕೊಪ್ಪಿರ ಸನ್ನಿ ಸೋಮಯ್ಯ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಶ್ರೀಕಾವೇರಿ ದಸರಾ ಸಮಿತಿ ಸ್ಥಾಪಕ ಸದಸ್ಯರಾದ ಬಾಲಕೃಷ್ಣ ರೈ, ಎಂ.ಜಿ.ಮೋಹನ್, ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಕೋಳೆರ ಭಾರತಿ, ಗೋಣಿಕೊಪ್ಪ ಗ್ರಾ.ಪಂ. ಸದಸ್ಯ ರಾಮಕೃಷ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಡಿ. ಮುಕುಂದ, ಸಮಿತಿ ಸದಸ್ಯ ಚಂದನ್ ಕಾಮತ್, ಹಿರಿಯರಾದ ಕೆ.ಬಿ. ಶಾಂತಪ್ಪ, ಉಪಾಧ್ಯಕ್ಷ ಶಿವಾಜಿ ಉಪಸ್ಥಿತರಿದ್ದರು.

ಕೃಷ್ಣ ಅನುಕುಮಾರ್ ಪ್ರಾರ್ಥಿಸಿ, ಶ್ರೀ ಕಾವೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ ಸ್ವಾಗತಿಸಿ, ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ವಂದಿಸಿದರು. ಸ್ವಾಗತ ಸಮಿತಿಯ ಪ್ರಮುಖರಾದ ಶೀಲಾ ಬೋಪಣ್ಣ ಮತ್ತು ಚಂದನ ಮಂಜುನಾಥ್ ನಿರೂಪಿಸಿದರು. ಉಸ್ತುವಾರಿ ಸಚಿವರು ಹಾಗೂ ಗಣ್ಯರು ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.

ಸುಬ್ರಹ್ಮಣ್ಯ ಮುದ್ರ ಶಾಲಾ ಮತ್ತು ನೃತ್ಯಾಲಯ ಸುಬ್ರಹ್ಮಣ್ಯ ಇವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು, ಮಡಿಕೇರಿ ನಾಟ್ಯ ಕಲಾ ಇವರಿಂದ ನಡೆದ ನೃತ್ಯ ಕಾರ್ಯಕ್ರಮಗಳು ಗಮನ ಸೆಳೆದವು.

-ಹೆಚ್.ಕೆ.ಜಗದೀಶ್