ಕಣಿವೆ, ಅ. ೧೬: ಬೀಡಾಡಿ ಜಾನುವಾರುಗಳ ಹಾವಳಿ ಕುಶಾಲ ನಗರ ತಾಲೂಕಿನ ದುಬಾರೆ ಹಾಗೂ ಆನೆಕಾಡು ಹೆದ್ದಾರಿಯಲ್ಲಿ ಸಾಗುವ ವಾಹನಗಳ ಚಾಲಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದೆ.

ಹಸುಗಳಿಂದ ಹಾಲನ್ನು ಕರೆದು ತಾವೂ ಕುಡಿದು ಉಳಿದದ್ದನ್ನು ಡೈರಿಗೆ ಹಾಕಿ ಒಂದಷ್ಟು ಲಾಭ ಗಳಿಸುವ ಆಕಳುಗಳ ಮಾಲೀಕರು ತಾವು ಸಾಕಿರುವ ಹಸುಗಳನ್ನು ಕಟ್ಟಿ ಹುಲ್ಲು ಹಾಕುವ ಬದಲು ರಸ್ತೆಗೆ ಓಡಿಸಿ ಮೈ ಮರೆಯುತ್ತಿದ್ದಾರೆ. ಇವರ ಈ ಬೇಜವಬ್ದಾರಿತನ ಹಲವು ಅವಘಡಗಳಿಗೆ ಕಾರಣವಾಗುತ್ತಿದೆ. ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬರುವ ದೂರದ ನಗರ ಪ್ರದೇಶಗಳ ಅಮಾಯಕ ಮಂದಿಯ ವಾಹನ ಗಳು ಈ ಜಾನುವಾರುಗಳಿಂದ ಹಾನಿಗೊಳಗಾಗುತ್ತಿವೆ. ಅಂದರೆ ರಸ್ತೆ ಯಲ್ಲಿ ಗುಂಪು ಗೂಡಿ ಸಾಗುವ ಈ ವಾಹನಗಳಿಗೆ ಜಾನುವಾರುಗಳು ಡಿಕ್ಕಿ ಯಾಗುವ ಕಾರಣ ವಾಹನಗಳಿಗೂ ನಷ್ಟ ಹಾಗೂ ಜಾನುವಾರುಗಳ ಜೀವಕ್ಕೂ ಅಪಾಯ ವಾಗುತ್ತಿದೆ. ಆನೆಕಾಡು ಅರಣ್ಯದಲ್ಲಿ ವೇಗವಾಗಿ ಬರುವ ವಾಹನ ಗಳಿಗೆ ಈ ಜಾನುವಾರುಗಳ ಬಗ್ಗೆ ಅರಿವಿರದ ಕಾರಣ ಹೆದ್ದಾರಿಯಲ್ಲೇ ವಾಹನಗಳು ಡಿಕ್ಕಿಗೊಳಪಟ್ಟು ಸಾವಿಗೀಡಾದರೂ ಕೂಡ ಗೋವುಗಳ ಪಾಲಕರಿಗೆ ಬುದ್ಧಿ ಬರುತ್ತಿಲ್ಲ.

ಇನ್ನು ಅತ್ಯಂತ ಹೆಚ್ಚು ಪ್ರವಾಸಿ ವಾಹನಗಳ ಸಂದಣಿಯ ದುಬಾರೆ ರಸ್ತೆಯಲ್ಲೂ ಇದೇ ಸ್ಥಿತಿ ಇದೆ. ಈ ಬಗ್ಗೆ ಸ್ಥಳೀಯ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಆಡಳಿತ ಒಂದಷ್ಟು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಜಾನುವಾರುಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ. ಅತ್ತ ಕುಶಾಲನಗರ ಟ್ರಾಫಿಕ್ ಪೋಲೀಸರು, ಪಂಚಾಯಿತಿ ಆಡಳಿತದೊಂದಿಗೆ ಸೇರಿಕೊಂಡು ಬೀಡಾಡಿ ದನಗಳ ನಿಯಂತ್ರಣಕ್ಕೆ ಮುಂದಾಗಬೇಕಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಪಿಡಿಒ ಶ್ಯಾಂ, ನಾವು ಪಂಚಾಯಿತಿ ವತಿಯಿಂದ ಬೀಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಯೋಚಿಸಿದಾಗ ಗೋವುಗಳನ್ನು ಕೂಡಿಡಲು ಸೂಕ್ತ ವಾದ ಕಟ್ಟಡದ ಸಮಸ್ಯೆ ಒಂದೆ ಡೆಯಾದರೆ, ಕೂಡಿಟ್ಟ ಗೋವುಗಳಿಗೆ ಸೂಕ್ತ ಹುಲ್ಲು ಹಾಗೂ ನೀರಿನ ಸೌಲಭ್ಯ ಒದಗಿಸುವುದು ನಮಗೆ ಕ್ಲಿಷ್ಟವಾಯಿತು.

ಹಾಗಾಗಿ ನಾವುಗಳು ಈ ಯೋಜನೆ ಕೈಬಿಟ್ಟೆವು. ಆದರೆ ಗೋವು ಗಳ ಪಾಲಕರಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ನಿಯಂತ್ರಣಕ್ಕೆ ಪ್ರಯತ್ನಿಸುತ್ತೇವೆ ಎಂದಿದ್ದಾರೆ.