ಮಡಿಕೇರಿ, ಅ. ೧೫: ಇತಿಹಾಸ ಪ್ರಸಿದ್ಧ ಬೊಟ್ಟ್'ಲಪ್ಪ (ಈಶ್ವರ) ದೇವರ ವಾರ್ಷಿಕ ಬೋಡ್ ನಮ್ಮೆ ತಾ. ೧೭ ಹಾಗೂ ೧೮ರಂದು ಪೊನ್ನಂಪೇಟೆ ತಾಲೂಕಿನ ಬೊಟ್ಟಿಯತ್‌ನಾಡ್ ಕುಂದ ಮುಗುಟಗೇರಿ ಗ್ರಾಮದಲ್ಲಿ ನಡೆಯಲಿದೆ.

ವರ್ಷಂಪ್ರತಿ ಕಾವೇರಿ ತೀರ್ಥೋದ್ಭವದ ದಿನದಂದು ನಡೆಯುವ ಬೊಟ್ಟಿಯತ್ ನಾಡ್ ಕುಂದ ಮುಗುಟಗೇರಿ ಗ್ರಾಮದ ಈ ಬೇಡು ಹಬ್ಬದಲ್ಲಿ ತಲಕಾವೇರಿ ಯಿಂದ ಪವಿತ್ರ ತೀರ್ಥವನ್ನು ತಂದು ಕುಂದಬೆಟ್ಟದ ಮೇಲಿರುವ ಈಶ್ವರ ದೇವರಿಗೆ ಅರ್ಪಿಸುವ ಮೂಲಕ ಕೊಡಗಿನ ಮೊದಲ ಬೇಡು ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಇಲ್ಲಿನ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.

ಹಬ್ಬಕ್ಕೆ ವಾರದ ಮುಂಚೆ ಗ್ರಾಮದಲ್ಲಿರುವ ನಾಡ್ ದೇವಸ್ಥಾನ (ಈಶ್ವರ ದೇವಸ್ಥಾನ) ಹತ್ತಿರ ಇರುವ ಅಂಬಲದಲ್ಲಿ ಬೋಡ್ ನಮ್ಮೆ ದೋಳ್ ಇಡುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದ್ದು, ಪ್ರತಿನಿತ್ಯ ಸಂಜೆ ಹಬ್ಬದತನಕ ಸಾಂಪ್ರದಾಯಿಕ ದೋಳ್ ಬಾರಿಸುವ ಮೂಲಕ ಹಬ್ಬದ ವಿವಿಧ ಸಾಂಪ್ರದಾಯ ನಡೆಯುತ್ತದೆ. ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬಸ್ಥರ ತಕ್ಕಾಮೆಯಲ್ಲಿ ಹಬ್ಬ ನಡೆಯಲಿದೆ. ತಾ. ೧೭ರಂದು ರಾತ್ರಿ ಇಲ್ಲಿನ ಅಂಬಲ ಹಾಗೂ ಈಶ್ವರ ದೇವಸ್ಥಾನದಲ್ಲಿ ಕಳಿ ಪೊರಡುವೋ ಹಾಗೂ ೧೮ರಂದು ಬೆಳಿಗ್ಗೆ ೯ ಗಂಟೆಗೆ ಇಲ್ಲಿನ ನಾಡ್ ದೇವಸ್ಥಾನದಲ್ಲಿ ಕಾವೇರಿ ಪವಿತ್ರ ತೀರ್ಥವನ್ನು ಸಾರ್ವಜನಿಕವಾಗಿ ನೀಡಲಾಗುತ್ತದೆ. ನಂತರ ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬಸ್ಥರ ಐನ್‌ಮನೆಯಿಂದ ಕೃತಕವಾಗಿ ಶೃಂಗರಿಸಲಾದ ಕುದುರೆ ಹಾಗೂ ಮೊಗಗಳು ಹೊರಟು ಮಧ್ಯಾಹ್ನ ೧ ಗಂಟೆಗೆ ಅಂಬಲದಲ್ಲಿ ಸೇರಿ ನಂತರ ಕಡಿದಾದ ದಾರಿಯಲ್ಲಿ ಬೆಟ್ಟವನ್ನು ಏರಿ ಮಧ್ಯಾಹ್ನ ಸುಮಾರು ೧-೩೦ಕ್ಕೆ ಬೆಟ್ಟವನ್ನು ತಲುಪಿ, ಸಂಜೆ ೪-೩೦ಗಂಟೆಯವರೆಗೆ ಕುಂದಬೆಟ್ಟದ ಮೇಲಿನ ಈಶ್ವರ ದೇವಸ್ಥಾನದಲ್ಲಿ ಹಬ್ಬವನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.