ಇಂದು ವಿಶ್ವ ಆಹಾರ ದಿನ

ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ನೆಲೆಯಾಗಿರುತ್ತದೆ ಎಂಬುವುದು ಗ್ರೀಕ್ ತತ್ವ ಜ್ಞಾನಿಯೊಬ್ಬರ ಮಾತು. ಇಂತಹ ಸದೃಢ ದೈಹಿಕ ಸಾಮರ್ಥ್ಯಕ್ಕೆ ಮೂಲ ಆಧಾರ ನಮ್ಮ ಆಹಾರ ಕ್ರಮ. ನಮ್ಮ ಆಹಾರ ಪದ್ಧತಿ ನಮ್ಮ ಆರೋಗ್ಯ ಹಾಗೂ ಆಯಸ್ಸನ್ನು ನಿರ್ಧಾರ ಮಾಡುತ್ತದೆ. ಪ್ರಪಂಚದ ಯಾವುದೇ ಬಲಾಢ್ಯ ರಾಷ್ಟçಗಳ ಮೂಲ ಶಕ್ತಿ ಅಲ್ಲಿಯ ಮಾನವ ಸಂಪನ್ಮೂಲವಾಗಿರುತ್ತದೆ. ಆರೋಗ್ಯವಂತ ಮಾನವ ಸಮುದಾಯವನ್ನು ಸದ್ಬಳಕೆ ಮಾಡಿಕೊಂಡ ಯಾವುದೇ ರಾಷ್ಟçವೂ ತನ್ನ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ.

ಇಂದು ವಿಶ್ವ ಆಹಾರ ದಿನ. ಜಾಗತಿಕ ಮಟ್ಟದಲ್ಲಿ ಆಹಾರ ಮತ್ತು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವವರ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯಿAದ ೧೯೮೧ ರಿಂದ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತಿದೆ.

ಪ್ರಕೃತಿಯು ಜೀವ ಸಂಕುಲದ ಪೋಷಣೆಗೆ ಎಲ್ಲಾ ಸಂಪನ್ಮೂಲಗಳನ್ನು ಸಾಕಷ್ಟು ಹೊಂದಿದ್ದರೂ ಅವೆಲ್ಲವೂ ಎಲ್ಲೆಡೆಯಲ್ಲಿಯೂ ಸಮಾನವಾಗಿ ಹಂಚಿಕೆಯಾಗಿಲ್ಲ ಎನ್ನುವುದು ಸತ್ಯ. ಹಾಗಾಗಿ ಆಯಾ ಭೂಭಾಗದಲ್ಲಿ ಯಾವ ಸಂಪನ್ಮೂಲಗಳ ಲಭ್ಯತೆ ಇದೆಯೋ, ಯಾವ ಬೆಳೆಗಳು ಫಸಲಿಗೆ ಯೋಗ್ಯವೋ ಮಾನವ ಅದಕ್ಕೆ ಪೂರಕವಾಗಿ ಬದುಕನ್ನು ಕಟ್ಟಿಕೊಂಡಿದ್ದಾನೆ. ತನ್ನದೇ ಆದ ಜೀವನ ಶೈಲಿಯನ್ನು ರೂಪಿಸಿಕೊಂಡಿದ್ದಾನೆ. ಜೀವಸಂಕುಲದ ಅಸ್ತಿತ್ವ ಉಳಿಸಿಕೊಳ್ಳಲು ಆಹಾರವೇ ಮೂಲ. ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ ಎಂಬ ನಾಣ್ನುಡಿಯಂತೆ ಹುಟ್ಟಿದ ಪ್ರತಿ ಜೀವಿಗೂ ಆಹಾರದ ಪೂರೈಕೆ ಆಗಲೇಬೇಕು. ಆದರೂ ಕಡು ಬಡತನವೆನ್ನುವ ಶಾಪ ಎಷ್ಟೋ ಅಮಾಯಕರಿಗೆ ಹಸಿವಿನಿಂದ ಕಂಗೆಟ್ಟು ಸಾವಿಗೆ ಶರಣಾಗುವಂತೆ ಮಾಡುತ್ತಿರುವುದು ಅತಿ ದೊಡ್ಡ ದುರಂತ. ಕಿತ್ತು ತಿನ್ನುವ ಬಡತನ, ಕೃಷಿ ಉತ್ಪಾದನೆಯ ಕೊರತೆ, ನೀರಾವರಿ ಸೌಲಭ್ಯದ ಕೊರತೆ ಹೀಗೆ ಆಹಾರದ ಕೊರತೆಗೆ ಹತ್ತು ಹಲವು ಕಾರಣಗಳು.

ಇವೆಲ್ಲದರ ಮಧ್ಯೆ ಶ್ರೀಮಂತ ವರ್ಗದಲ್ಲಿ ಆಹಾರದ ಬಗೆಗಿರುವ ನಿರ್ಲಕ್ಷö್ಯ ಧೋರಣೆ ಖಂಡಿತಾ ಸರಿಯಲ್ಲ. ಮದುವೆ, ಸಭೆ ಸಮಾರಂಭಗಳಲ್ಲಿ ಕಸದ ಬುಟ್ಟಿಗೆ ಎಸೆಯಲ್ಪಟ್ಟ ಊಟದ ಎಲೆಗಳಲ್ಲಿ ಬಾಕಿಯಾದ ಆಹಾರದ ಪ್ರಮಾಣ ನೋಡುವಾಗ ಊಟ ಸಿಗದೇ ಪ್ರಾಣ ಕಳೆದುಕೊಳ್ಳುತ್ತಿರುವ ಅಮಾಯಕರ ಚಿತ್ರಣ ಕಣ್ಣ ಮುಂದೆ ಬರುತ್ತದೆ. ವಿವೇಚನೆಯುಳ್ಳ ನಾಗರಿಕ ಸಮುದಾಯದ ಹೊಣೆಗಾರಿಕೆಯೆಂದರೆ ಯಾವುದೇ ವಸ್ತುವಾಗಲಿ ಅನವಶ್ಯಕವಾಗಿ ವ್ಯರ್ಥ ಮಾಡುವ ಅಭ್ಯಾಸಕ್ಕೆ ಕಡಿವಾಣ ಹಾಕಬೇಕಾಗಿರುವುದು. ಯಾರಿಗೆ ಉತ್ಪಾದಿಸುವ ಸಾಮರ್ಥ್ಯವಿರುವುದಿಲ್ಲವೋ ಅದನ್ನು ವ್ಯರ್ಥ ಮಾಡುವ ಹಕ್ಕು ಕೂಡ ನಮಗಿರಲಾರದು. ಹಿಂದಿನ ನಮ್ಮ ಹಿರಿಯರ ಆಹಾರ ಕ್ರಮ ಅವರ ಆಯುಸ್ಸು ಮತ್ತು ಆರೋಗ್ಯದ ರಹಸ್ಯ. ಆಹಾರ ತೆಗೆದುಕೊಳ್ಳುವಾಗ ಅವರು ಕೆಳಗೆ ಕುಳಿತು ಭಕ್ತಿಯಿಂದ ಪ್ರಾರ್ಥಿಸಿ ಅನಂತರ ಪ್ರಸಾದದಂತೆ ಆಹಾರವನ್ನು ಸ್ವೀಕರಿಸುತ್ತಿದ್ದರು. ಒಂದೊAದು ತುತ್ತು ಕೂಡ ಪರಮ ಪ್ರಸಾದದಂತೆ ಭಕ್ತಿಯಿಂದ ಸ್ವೀಕಾರವಾಗುತ್ತಿತ್ತು. ಇಂದಿನ ನಮ್ಮ ಜೀವನ ಶೈಲಿ, ನಮ್ಮ ಆಹಾರ ಪದ್ಧತಿಗೆಲ್ಲಾ ಆಧುನಿಕತೆಯ ಸ್ಪರ್ಶದಿಂದಾಗಿ ಯಾವುದೂ ಕೂಡ ಜೀವ ಸಂಕುಲಕ್ಕೆ ಆರೋಗ್ಯದಾಯಕವಾಗಿ ಪರಿಣಮಿಸುತ್ತಿಲ್ಲ. ಯಾವುದು ನಮ್ಮ ದೈಹಿಕ ಆರೋಗ್ಯದ, ಸಾಮರ್ಥ್ಯದ ಗುಟ್ಟಾಗಿರಬೇಕಾಗಿತ್ತೋ ಅದೇ ಇಂದು ವಿಷವಾಗಿ ಪರಿಣಮಿಸಿದೆ, ರೋಗಗಳ ಮೂಲವಾಗಿದೆ ಎನ್ನುವುದು ಆತಂಕಕಾರಿ ವಿಚಾರ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುವಂತಾಗಿದೆ. ಇಲ್ಲದವರಿಗೆ ಹೊಟ್ಟೆ ತುಂಬುವಷ್ಟು ಆಹಾರದ ಸಮಸ್ಯೆ, ಉಳ್ಳವರಿಗೆ ದೇಹದ ತುಂಬಾ ಆರೋಗ್ಯದ ಸಮಸ್ಯೆ! ಹಾಗಾಗಿ ಬೇಕಾದದ್ದನ್ನು ಬೇಕಾಗುವಷ್ಟು ತಿನ್ನುವಲ್ಲಿಯೂ ಕಟ್ಟುನಿಟ್ಟು, ಪಥ್ಯ ಮಾಡಲೇಬೇಕಾದ ಅನಿವಾರ್ಯತೆ. ಒಂದು ಹೊತ್ತು ಉಂಡವನು ಯೋಗಿ, ಎರಡು ಹೊತ್ತು ಉಂಡವನು ಭೋಗಿ. ಮೂರು ಹೊತ್ತು ಉಂಡವನು ರೋಗಿ ಎಂಬ ತತ್ತ್ವವನ್ನು ಪಾಲಿಸುವವ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುವನು.

ಹಿಂದಿನ ಕಾಲದಲ್ಲಿ ಇದ್ದಷ್ಟು ಆಹಾರದ ಸಮಸ್ಯೆ ಈಗ ಇಲ್ಲವಾದರೂ ಲಭ್ಯವಿರುವ ಆಹಾರ, ನಮ್ಮ ಆಹಾರ ಪದ್ಧತಿ ನಿಜಕ್ಕೂ ಆರೋಗ್ಯಪ್ರದವಾಗಿಲ್ಲ. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ದಾಸರ ವಾಣಿ ಕಾಯಕವೇ ಕೈಲಾಸ ಎಂಬ ತತ್ತ್ವಕ್ಕೆ ಒತ್ತು ನೀಡುತ್ತದೆ. ಆದರೂ ನಮ್ಮ ಇಂದಿನ ಕಾರ್ಯವೈಖರಿಯಲ್ಲಿ ಇರುವ ಪ್ರಾಮಾಣಿಕತೆ, ಮೌಲ್ಯಗಳಲ್ಲಿ ಅದೇಕೋ ಕರಿನೆರಳ ಛಾಯೆ ಎದ್ದು ಕಾಣಿಸುತ್ತದೆ.

‘ಅನ್ನವುಣುವಂದು ಕೇಳ್ ಅದನು ಬೇಯಿಸಿದ ನೀರ್ ನಿನ್ನ ದುಡಿತದ ಬೆಮರೋ, ಪರರ ಕಣ್ಣೀರೋ?’ ಡಿವಿಜಿ ಯವರ ಮಂಕುತಿಮ್ಮನ ಕಗ್ಗದಲ್ಲಿನ ಪ್ರಶ್ನೆಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಮಾನವನ ನೈಜ ಗುಣ ಮಾನವೀಯ ಮೌಲ್ಯಗಳು ಇಂದು ವಾಣಿಜ್ಯÃಕರಣದ ಫಲವಾಗಿ ತಿನ್ನುವ ಆಹಾರಕ್ಕೂ ಲಂಗು ಲಗಾಮಿಲ್ಲದೆ ವಿಷಪ್ರಾಷನವಾಗುತ್ತಿದೆ ಎಂದಾದರೆ ಮನುಷ್ಯ ಮನುಷ್ಯನಾಗಿಲ್ಲ. ಮೃಗವಾಗುತ್ತಿದ್ದಾನೆ!

ವಿಶ್ವ ಆಹಾರ ದಿನದ ಉದ್ದೇಶ ಆಹಾರದ ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹ, ಬೆಂಬಲದ ಮೂಲಕ ಸ್ವಾವಲಂಬನೆ ಸಾಧಿಸುವುದು. ಇಂದು ಆಹಾರ ಬೆಳೆಯುವ ಕೃಷಿ ಭೂಮಿ ಸೈಟ್, ಕಟ್ಟಡಗಳ ನಿರ್ಮಾಣಕ್ಕೆ ಬಳಕೆಯಾಗಿ ಹಣದ ಹೊಳೆಯನ್ನೇ ಹರಿಸುತ್ತಿರಬಹುದು. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಮುಂದಿನ ಜನಾಂಗ ಬೆಳೆ ಬೆಳೆಯುವ ಭೂಮಿಗಾಗಿ ಬಹುಶಃ ಹಣದ ರಾಶಿಯನ್ನೇ ಸುರಿದರೂ ಒಂದು ಹಿಡಿಯಷ್ಟು ಆಹಾರ ಗಳಿಸುವುದಕ್ಕೂ ಪರದಾಡಬೇಕಾಗಬಹುದು. ಇಂತಹ ಗಂಭೀರ ಸಮಸ್ಯೆಗಳನ್ನು ಪ್ರಜ್ಞಾವಂತ ಸಮಾಜ ಗಣನೆಗೆ ತೆಗೆದುಕೊಂಡು ಬದುಕುವ ಸೂತ್ರವನ್ನು ಅಳವಡಿಸಿಕೊಳ್ಳಬೇಕಾಗಿದೆ. ಅನ್ನದ ಮಹತ್ವವರಿತು, ಅದನ್ನು ಬೆಳೆಯುವ ದೇಶದ ಬೆನ್ನೆಲುಬು ರೈತನ ಪರವಾಗಿ ಖಾಸಗಿ ಹಾಗೂ ಸರಕಾರಿ ವಲಯ ಎರಡೂ ಸಹಕಾರದಿಂದ ಕೈಜೋಡಿಸಿ ಅನಾಹುತ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸೋಣ. "ವಸುಧೈವ ಕುಟುಂಬಕA" ಎಂಬ ಮಾತು ನಿಜವಾಗಬೇಕಾದರೆ ಹಸಿವು ಮುಕ್ತ ಪ್ರಪಂಚದಲ್ಲಿ ಜೀವಂತವಾಗಿರುವ ಪ್ರತಿಯೊಂದು ಜೀವಿಗೂ ಆಹಾರದ ಪೂರೈಕೆಯಾಗಬೇಕು. ಇದಕ್ಕಾಗಿ ದುಡಿಮೆಯ ಸಾರ್ಥಕ ಫಲ ಸಂದಾಯವಾಗಬೇಕು. ಮೊದಲು ನಮ್ಮೆಲ್ಲರಲ್ಲಿ ಮಾನಸಿಕ ಸಂಸ್ಕಾರ ರೂಪುಗೊಳ್ಳಬೇಕು.

- ಪ್ರತಿಮಾ ಹರೀಶ್ ರೈ, ಉಪನ್ಯಾಸಕರು, ಸೈಂಟ್ ಆನ್ಸ್ ಪದವಿ ಕಾಲೇಜು, ವೀರಾಜಪೇಟೆ.