ಸೋಮವಾರಪೇಟೆ ,ಅ. ೧೬ : ಚುನಾವಣಾ ಪೂರ್ವ ನೀಡಿದ್ದ ಆಶ್ವಾಸನೆಗಳಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ೪ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಕೊಡಗಿನಲ್ಲಿ ಪ್ರತಿ ತಿಂಗಳು ಗ್ಯಾರಂಟಿ ಯೋಜನೆ ಗಳಿಗಾಗಿ ರೂ. ೨೩.೫೮ ಕೋಟಿ ವಿನಿಯೋಗಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಅವರು ಮಾಹಿತಿ ನೀಡಿದರು.

ಜಿಲ್ಲಾಡಳಿತದ ವತಿಯಿಂದ ಇಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಗೊಳ್ಳುತ್ತಿವೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಆದರೆ ಗ್ಯಾರಂಟಿ ಯೋಜನೆಗಳೊಂದಿಗೆ ಅನೇಕ ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ತನ್ನ ಇಲಾಖೆಯೊಂದಕ್ಕೆ ೧೮,೦೦೦ ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ ಎಂದು ಸಚಿವರು ತಿಳಿಸಿದರು.

ಕೊಡಗಿನಲ್ಲಿ ಗೃಹಜ್ಯೋತಿ ಯೋಜನೆಯ ಮೂಲಕ ೧,೩೫,೩೯೧ ಫಲಾನುಭವಿಗಳಿಗೆ ಪ್ರತಿ ತಿಂಗಳು ೬.೬೫ ಕೋಟಿ, ಶಕ್ತಿ ಯೋಜನೆಯಡಿ ಸರಾಸರಿ ೧.೮೪ ಕೋಟಿ, ಗೃಹಲಕ್ಷಿö್ಮÃ ಯೋಜನೆಯಡಿ ೧೦.೪೧ ಕೋಟಿ, ಅನ್ನಭಾಗ್ಯ ಯೋಜನೆಯಡಿ ೪.೬೮ ಕೋಟಿ ಹಣವನ್ನು ಸರ್ಕಾರ ಸಂಬAಧಪಟ್ಟ ಇಲಾಖೆಗಳಿಗೆ ಭರಿಸಿ ಸಾರ್ವಜನಿಕರಿಗೆ ಸೌಲಭ್ಯ ಒದಗಿಸುತ್ತಿದೆ ಎಂದು ಅಂಕಿ ಅಂಶಗಳನ್ನು ಮುಂದಿಟ್ಟರು. ಇದರೊಂದಿಗೆ ಯುವ ನಿಧಿ ಯೋಜನೆಯು ಡಿಸೆಂಬರ್ ಅಥವಾ ಜನವರಿಯೊಳಗೆ ಜಾರಿಗೊಳ್ಳಲಿದೆ ಎಂದು ಭರವಸೆ ನೀಡಿದರು.

ಕೊಡಗಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೂಲಕ ಸೈನ್ಸ್ ಸೆಂಟರ್ ಸ್ಥಾಪನೆಗೆ ಯೋಜನೆಗೆ ರೂಪಿಸಲಾಗುತ್ತಿದೆ. ಮಡಿಕೇರಿಯಲ್ಲಿ ಕನಿಷ್ಟ ೭ ಎಕರೆ ಜಾಗವನ್ನು ಗುರುತಿಸಲಾಗುತ್ತಿದೆ. ನವೆಂಬರ್ ೧ರಂದು ಯೋಜನೆಗೆ ಶಂಕುಸ್ಥಾಪನೆ ನಡೆಯಲಿದೆ ಎಂದು ಬೋಸರಾಜು ಅವರು ತಿಳಿಸಿದರು.

ಸರ್ಕಾರ ಮತ್ತು ವಿವಿಧ ಇಲಾಖೆಗಳು ಜನರ ಮನೆ ಬಾಗಿಲಿಗೆ ತಲುಪಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನತಾ ದರ್ಶನ ಕಾರ್ಯಕ್ರಮ ರೂಪಿಸಿದ್ದು,

(ಮೊದಲ ಪುಟದಿಂದ) ಅದರಂತೆ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಪ್ರತಿ ೩ ತಿಂಗಳಿಗೊಮ್ಮೆ ಜನತಾ ದರ್ಶನ ನಡೆಯಲಿದೆ. ಇದರೊಂದಿಗೆ ಜಿಲ್ಲಾಧಿಕಾರಿಗಳು, ಶಾಸಕರನ್ನು ಒಳಗೊಂಡAತೆ ಪ್ರತಿ ತಿಂಗಳು ಜನತಾ ದರ್ಶನ ನಡೆಯಲಿದೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಇದು ಹೆಚ್ಚಿನ ಸಹಕಾರಿಯಾಗಲಿದೆ ಎಂದರು.

ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ನೇರವಾಗಿ ತಲುಪಿಸಲಾಗುತ್ತಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ತುಂಬುವ ಮೂಲಕ ಮಧ್ಯವರ್ತಿಗಳಿಗೆ ಕಡಿವಾಣ ಹಾಕಲಾಗಿದೆ. ದೇಶದಲ್ಲಿಯೇ ಕರ್ನಾಟಕ ರಾಜ್ಯ ಸರ್ಕಾರ ಮಾದರಿ ಹಾಗೂ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದೆ ಎಂದು ಸಚಿವರು ಹೇಳಿದರು. ಜನತಾ ದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು, ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ತಾಲೂಕಿನ ಪ್ರಮುಖ ಸಮಸ್ಯೆಗಳನ್ನು ಸಚಿವರೆದುರು ಪ್ರಸ್ತಾಪಿಸಿದರು.

ಪ್ರಮುಖವಾಗಿ ಕಂದಾಯ ಇಲಾಖೆಯಲ್ಲಿ ರೈತರ ಜಾಗಕ್ಕೆ ಸಂಬAಧಿಸಿದ ಅರ್ಜಿಗಳು ವಿಲೇವಾರಿ ಯಾಗುತ್ತಿಲ್ಲ. ಅಭಿಲೇಖಾಲಯ ಹಾಗೂ ಸರ್ವೆ ಇಲಾಖೆಯಲ್ಲಿಯೂ ಕಳೆದ ಅನೇಕ ವರ್ಷಗಳಿಂದ ಕಡತಗಳು ಧೂಳು ಹಿಡಿಯುತ್ತಿವೆ. ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ವರ್ಗವಾಗುತ್ತಿದ್ದಂತೆ ಇತ್ತ ದಾಖಲೆಗಳು ಮೂಲೆಗುಂಪಾಗುತ್ತಿವೆ. ರೈತರು ಕಚೇರಿಗೆ ಅಲೆದು ಬೇಸತ್ತಿದ್ದಾರೆ. ತಕ್ಷಣ ಕಂದಾಯ ಇಲಾಖೆಯ ಸಿಬ್ಬಂದಿಗಳ ಬದಲಾವಣೆ ಅವಶ್ಯಕವಾಗಿವೆ ಎಂದು ಸಚಿವರ ಗಮನ ಸೆಳೆದರು.

ಇದರೊಂದಿಗೆ ಸೆಸ್ಕಾಂನಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಮಳೆಗಾಲದಲ್ಲಿ ದುರಸ್ತಿ ಕಾರ್ಯಗಳು ಹೆಚ್ಚಿರುವುದರಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದ ಶಾಸಕರು, ಕೊಡಗಿನ ರೈತರ ಬಹು ದಶಕಗಳ ಬೇಡಿಕೆಯಾದ ೧೦ ಹೆಚ್.ಪಿ. ವರೆಗಿನ ಪಂಪ್‌ಸೆಟ್‌ಗಳಿಗೆ ಇತರ ಜಿಲ್ಲೆಗಳಂತೆ ಉಚಿತ ವಿದ್ಯುತ್ ಒದಗಿಸಲು ಕ್ಯಾಬಿನೆಟ್‌ನಲ್ಲಿ ಗಮನ ಸೆಳೆಯಬೇಕೆಂದು ಮಂಥರ್ ಗೌಡ ಹೇಳಿದರು.

ಅರಣ್ಯ ಹಾಗೂ ಕಂದಾಯ ಇಲಾಖೆಯ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ರೈತರು ತಮ್ಮ ಜಾಗಕ್ಕೆ ದಾಖಲೆಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಸರ್ಕಾರದ ಸೌಲಭ್ಯಗಳೂ ಸಿಗದಂತಾಗಿದೆ. ಕಂದಾಯ ಮತ್ತು ಅರಣ್ಯ ಇಲಾಖೆಗಳನ್ನು ಒಳಗೊಂಡAತೆ ಜಂಟಿ ಸಭೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಕೆಎಸ್‌ಆರ್‌ಟಿಸಿಗೆ ಸಂಬAಧಿಸಿ ದಂತೆ ೯೧ ಬಸ್ ರೂಟ್ ಇದ್ದರೂ ಬೆರಳೆಣಿಕೆಯ ಬಸ್‌ಗಳು ಸಂಚರಿಸುತ್ತಿವೆ. ಹೆಚ್ಚುವರಿ ಬಸ್‌ಗಳನ್ನು ಕಲ್ಪಿಸಬೇಕು. ಇದರೊಂದಿಗೆ ಸೋಮವಾರಪೇಟೆಯಲ್ಲಿ ಹಲವಷ್ಟು ಕಾಮಗಾರಿಗಳು ಅಪೂರ್ಣಗೊಂಡಿವೆ. ಇದರಲ್ಲಿ ಶತಮನೋತ್ಸವ ಭವನ, ಟರ್ಫ್ ಮೈದಾನ ಸೇರಿವೆ. ಶತಮಾನೋತ್ಸವ ಭವನಕ್ಕೆ ೪ ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಟರ್ಫ್ ಮೈದಾನದ ತಡೆಗೋಡೆಗೆ ೫೦ ಲಕ್ಷ ಅನುದಾನ ಕೇಳಲಾಗಿದೆ. ಈ ಬಗ್ಗೆ ತುರ್ತು ಗಮನ ಹರಿಸುವಂತೆ ಮಂಥರ್ ಗೌಡ ಅವರು ಸಚಿವರ ಗಮನಕ್ಕೆ ತಂದರು.

ತಾಲೂಕಿನಲ್ಲಿ ೬೩೭ ಬಿಪಿಎಲ್ ಕಾರ್ಡ್ದಾರರಿಗೆ ಅನ್ನಭಾಗ್ಯ ಯೋಜನೆಯ ಹಣ ಬರುತ್ತಿಲ್ಲ. ಇದರೊಂದಿಗೆ ಸಾವಿರಾರು ಮಂದಿಗೆ ಗೃಹಲಕ್ಷಿö್ಮÃ ಯೋಜನೆಯ ಹಣ ಜಮಾವಣೆಯಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸ ಬೇಕೆಂದು ಶಾಸಕರು ಸೂಚಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಜನತಾ ದರ್ಶನ ಆಯೋಜಿಸಿದೆ. ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರವೇ ಮನೆ ಬಾಗಿಲಿಗೆ ಬಂದಿದೆ. ಇಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಖುದ್ದು ತಾವೇ ಪರಿಶೀಲಿಸಿ ಕ್ರಮ ವಹಿಸುತ್ತೇವೆ ಎಂದರು.

ಸಭೆಯಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಅಪರ ಜಿಲ್ಲಾಧಿಕಾರಿ ವೀಣಾ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ನೂರಾರು ಮಂದಿ ಸಾರ್ವಜನಿಕರು ಸಭೆಗೆ ಆಗಮಿಸಿ ಸಚಿವರಿಗೆ ಮನವಿಗಳನ್ನು ಸಲ್ಲಿಸಿದರು. ಇದೇ ಸಂದರ್ಭ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಲಾಯಿತು. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಸಭಾಂಗಣದ ಹೊರಭಾಗದಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿತ್ತು. ಖುದ್ದು ಸಚಿವರೇ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಇಲಾಖೆಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಗ್ಯ ಇಲಾಖೆಯಿಂದ ಅಂಗಾAಗ ದಾನ ನೋಂದಣಿ, ಉಚಿತ ರಕ್ತದೊತ್ತಡದ ಹಾಗೂ ಮಧುಮೇಹ ತಪಾಸಣೆ ನಡೆಯಿತು.