ಮುಳ್ಳೂರು, ಅ. ೧೫: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಶಿವರಳ್ಳಿ, ಬೆಂಬಳೂರು, ಲಕನಿ, ಅವರೆದಾಳು, ನಾಕಲಗೋಡು ಮುಂತಾದ ಗ್ರಾಮಗಳಲ್ಲಿ ಹಲವು ದಿನಗಳಿಂದ ಚಿರತೆಯ ಓಡಾಟದ ಹೆಜ್ಜೆಗಳ ಗುರುತು ಪತ್ತೆಯಾಗುತ್ತಿರುವ ಬೆನ್ನಲೆ ಗ್ರಾಮಸ್ಥರ ಸಾಕು ನಾಯಿಗಳು ಕಾಣೆಯಾಗುತ್ತಿದ್ದು, ಇದರಿಂದ ರೈತರು ಮತ್ತು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ಹೋಬಳಿಯ ಲಕನಿ, ಶಿವರಳ್ಳಿ, ನಾಕಲಗೋಡು ಮತ್ತು ಬೆಂಬಳೂರು ಗ್ರಾಮಗಳಲ್ಲಿ ಹಲವು ದಿನಗಳಿಂದ ಚಿರತೆ ಓಡಾಡುತ್ತಿರುವ ಹೆಜ್ಜೆಗುರುತು ಕಾಣಿಸಿಕೊಂಡಿದೆ. ಇತ್ತೀಚೆಗೆ ಮೈಸೂರಿನಿಂದ ಸಕಲೇಶಪುರ ಕಡೆಗೆ ವಾಹನವೊಂದರಲ್ಲಿ ಇದೆ ಮಾರ್ಗ ವಾಗಿ ಸಂಚರಿಸುತ್ತಿದ್ದಾಗ ದೊಡ್ಡ ಕುಂದ ಗ್ರಾಮದ ಬಳಿ ಚಿರತೆಯೊಂದು ಕಾಣಿಸಿಕೊಂಡಿದ್ದ ಮಾಹಿತಿ ತಿಳಿದುಕೊಂಡ ಗ್ರಾಮಸ್ಥರು ಮತ್ತು ರೈತರು ತಮ್ಮ ಹೊಲಗದ್ದೆ ತೋಟಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿರುವ ಜೊತೆಯಲ್ಲಿ ಕಾರ್ಮಿಕರು ಹೊಲಗದ್ದೆ ತೋಟ ಗಳಲ್ಲಿ ಕೆಲಸ ಮಾಡಲು ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಶಿವರಳ್ಳಿ ಗ್ರಾಮದ ಆನಂದ, ಕೊಮರಪ್ಪ, ಕುಮಾರಸ್ವಾಮಿ ಮತ್ತು ಹಾಲಪ್ಪ ಇವರುಗಳ ಸಾಕುನಾಯಿಗಳು ಗ್ರಾಮದಲ್ಲಿ ಚಿರತೆ ಓಡಾಟದ ಹೆಜ್ಜೆಗುರುತು ಕಾಣಿಸಿಕೊಂಡ ದಿನ ಮನೆಯಿಂದ ಕಾಣೆಯಾಗಿವೆ. ಅದೇ ರೀತಿ ಲಕನಿ ಗ್ರಾಮದ ಕಾಫಿ ತೋಟದ ಮಧ್ಯೆ ಇರುವ ಮನೆಯಿಂದ ಸಾಕು ನಾಯಿಯನ್ನು ಚಿರತೆ ಎಳೆದಾಡಿರುವ ಬಗ್ಗೆಯು ಮಾಹಿತಿ ಲಭ್ಯವಾಗಿದೆ. ಇದರಿಂದ ಈ ಭಾಗದ ಗ್ರಾಮಸ್ಥರು ಮತ್ತು ರೈತರು ಭಯದಿಂದ ಹೊರಗಡೆ ಬಾರದೆ ಮನೆಯೊಳಗೆ ಇರುವ ಮಾಹಿತಿ ತಿಳಿದ ಅರಣ್ಯ ಇಲಾಖೆ ಯವರು ಚಿರತೆಯ ಹೆಜ್ಜೆಗುರುತು ಕಾಣಿಸಿಕೊಂಡ ಸ್ಥಳದ ಕಾಫಿತೋಟ ದೊಳಗೆ ಚಿರತೆಯನ್ನು ಹಿಡಿಯಲು ಬೋನನ್ನು ಇಟ್ಟಿದ್ದು, ಪ್ರತಿದಿನ ಅರಣ್ಯ ಇಲಾಖೆ ಸಿಬ್ಬಂದಿ ಈ ಭಾಗದಲ್ಲಿ ಚಿರತೆಗಾಗಿ ಶೋಧ ಕಾರ್ಯಾಚರಣೆ ಮಾಡುತ್ತಿದ್ದಾರೆ. ಚಿರತೆಯ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ವಾರ ದಿಂದ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಮತ್ತು ಗ್ರಾಮಸ್ಥರಿಗೆ ಮತ್ತು ರೈತರಿಗೆ ಮುನ್ನೆಚ್ಚರಿಕೆಯಿಂದ ಇರುವಂತೆ ಮನವಿ ಮಾಡುತ್ತಿದ್ದಾರೆ.
-ಭಾಸ್ಕರ್ ಮುಳ್ಳೂರು