ಗೋಣಿಕೊಪ್ಪ ವರದಿ, ಅ. ೧೪ : ಬಿಟ್ಟಂಗಾಲದಲ್ಲಿ ಕಾಡಾನೆ ಹಿಂಡು ದಾಳಿಗೆ ಸುಮಾರು ಒಂದು ಎಕರೆ ಭತ್ತ ಬೆಳೆ ನಷ್ಟವಾಗಿದೆ.

ಗ್ರಾಮದ ರಾಮಚಂದ್ರ, ಅರುಣ, ರವೀಂದ್ರ ಎಂಬುವರಿಗೆ ಸೇರಿದ ಭತ್ತದ ಗದ್ದೆಗಳಿಗೆ ಸುಮಾರು ೧೫ ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ನಡೆಸಿವೆ. ಒಂದು ಎಕರೆಯಷ್ಟು ಜಾಗದಲ್ಲಿ ಬೆಳೆದಿದ್ದ ಭತ್ತದ ಪೈರುಗಳನ್ನು ತುಳಿದು ಧ್ವಂಸಗೊಳಿಸಿವೆ. ಬೆಳಿಗ್ಗೆ ಸಮಯದಲ್ಲಿ ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟಿದರೂ ಕೂಡ ರಾತ್ರಿ ಹಿಂತಿರುಗಿ ಬಂದು ದಾಳಿ ಮಾಡಿವೆ. ಬೆಳೆ ಉಳಿಸಿಕೊಳ್ಳಲು ರೈತರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ಹಗಲು ರಾತ್ರಿ ಎನ್ನದೆ ಕಾಯುತ್ತಿದ್ದರೂ ದಾಳಿಯಿಂದ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಭತ್ತದ ಬೆಳೆ ಹಾನಿಗೊಂಡ ಸ್ಥಳಕ್ಕೆ ರೈತ ಸಂಘದ ಪದಾಧಿಕಾರಿಗಳು ಭೇಟಿ ನೀಡಿದರು.

ರೈತ ಸಂಘದ ಒಂದನೇ ರುದ್ರಗುಪ್ಪೆಯ ಅಧ್ಯಕ್ಷ ಕೊಕ್ಕೆರ ಅಯ್ಯಣ್ಣ ಮಾತನಾಡಿ, ಅರಣ್ಯ ಸಿಬ್ಬಂದಿ ಹಗಲಿನಲ್ಲಿ ಕಾಡಾನೆಗಳನ್ನು ಕಾಡಿಗಟ್ಟಿದರೆ, ಮತ್ತೆ ರಾತ್ರಿ ಮರಳಿ ಬೆಳೆ ನಾಶಪಡಿಸುತ್ತಿವೆ. ಈ ವ್ಯಾಪ್ತಿಯಲ್ಲಿ ಸೋಲಾರ್ ಬೇಲಿ ನಿರ್ವಹಣೆ ಇಲ್ಲದ ಕಾರಣ ಕಾಡಾನೆಗಳು ಕೃಷಿ ಪ್ರದೇಶಗಳಿಗೆ ದಾಳಿ ನಡೆಸುತ್ತಿದ್ದು, ಸೋಲಾರ್ ಬೇಲಿ ನಿರ್ವಹಣೆ ಬಗ್ಗೆ ಕ್ಷೇತ್ರದ ಶಾಸಕರು ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು.

ಗ್ರಾಮಸ್ಥರಾದ ರಾಮಚಂದ್ರ, ಅರುಣ, ರವೀಂದ್ರ, ಸೀತಾರಾಮ ಇದ್ದರು.