ಸೋಮವಾರಪೇಟೆ, ಅ. ೧೪: ಅಖಿಲ ಭಾರತೀಯ ಸಂತ ಸಮಿತಿಯ ಕೊಡಗು ಜಿಲ್ಲಾ ಅಧ್ಕಕ್ಷರಾಗಿ ಅರಸಿನಕುಪ್ಪೆ-ಸಿದ್ಧಲಿಂಗಪುರದ ಶ್ರೀ ಮಂಜುನಾಥಸ್ವಾಮಿ ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‌ನಾಥ್ ಗುರೂಜಿ ಅವರನ್ನು ನೇಮಕ ಮಾಡಲಾಗಿದೆ. ಮೂಡಬಿದರಿಯ ಶ್ರೀ ದಿಗಂಬರ ಜೈನ ಮಠದಲ್ಲಿ ಜರುಗಿದ ಸಂತರ ಸಮಾವೇಶದಲ್ಲಿ ಕೊಡಗು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅಧ್ಯಕ್ಷರುಗಳನ್ನು ನೇಮಕ ಮಾಡಲಾಯಿತು. ಅಖಿಲ ಭಾರತೀಯ ಸಂತ ಸಮಿತಿಯ ರಾಜ್ಯಾಧ್ಯಕ್ಷ ಮಹಾಮಂಡಲೇಶ್ವರ ಸ್ವಾಮಿ ಶ್ರೀ ವಿದ್ಯಾನಂದ ಸರಸ್ವತಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾವೇಶದಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಸುಬ್ರಹ್ಮಣ್ಯ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ನೇಮಕ ಮಾಡಲಾಯಿತು. ಹಿಂದೂ, ಜೈನ ಮತ್ತು ಬೌದ್ಧ ಧರ್ಮಗಳಲ್ಲಿ ಐಕ್ಯತೆ ಮತ್ತು ಸೌಹಾರ್ದತೆಗಾಗಿ ಸಭೆ ಸಮಾರಂಭ ಹಮ್ಮಿಕೊಳ್ಳುವುದು, ಅಯೋಧ್ಯೆ ಶ್ರೀ ರಾಮ ಕ್ಷೇತ್ರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ನ.೨ ರಿಂದ ೫ ರವರೆಗೆ ಕಾಶಿ ವಾರಾಣಾಸಿಯಲ್ಲಿ ನಡೆಯುವ ಸಂಸ್ಕೃತಿ ಸಂಸತ್-೨೩ ಕಾರ್ಯಕ್ರಮದಲ್ಲಿ ಬಹು ಸಂಖ್ಯೆಯಲ್ಲಿ ಸ್ವಾಮೀಜಿಗಳು ಭಾಗವಹಿಸುವುದು. ಮುಜರಾಯಿ ಇಲಾಖೆಯಿಂದ ಮಠಗಳಿಗೆ ಕೊಡುವ ಆರ್ಥಿಕ ಸಹಾಯ ಸಮಾನತೆಯಲ್ಲಿ ಎಲ್ಲಾ ಮಠಗಳಿಗೂ ವಿತರಣೆಯಾಗಬೇಕು ಎಂಬ ವಿಚಾರಗಳು ಸೇರಿದಂತೆ ಹತ್ತು ಹಲವು ವಿಷಯಗಳು ಸಭೆಯಲ್ಲಿ ಚರ್ಚೆ ಯಾಯಿತು. ಮುಂದಿನ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಪ್ರಾಂತ ಸಮಾವೇಶವನ್ನು ನಡೆಸುವಂತೆ ತೀರ್ಮಾನಿಸಲಾಯಿತು.

ಸಮಾವೇಶದಲ್ಲಿ ಶ್ರೀ ದಿಗಂಬರ ಜೈನಮಠದ ಜಗದ್ಗುರು ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚ ರ್ಯವರ್ಯ ಮಹಾಸ್ವಾಮೀಜಿ ಸೇರಿದಂತೆ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿನ ಮಠಾಧೀಶರು, ವಿವಿಧ ದೇವಾಲಯಗಳ ಪೀಠಾಧಿಪತಿಗಳು, ಸ್ವಾಮೀಜಿಗಳು ಪಾಲ್ಗೊಂಡಿದ್ದರು.