ಮಡಿಕೇರಿ, ಅ. ೧೪: ಭಾಗಮಂಡಲ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಡಗು ಭಾಗಮಂಡಲ ಗ್ರಾಮ ಪಂಚಾಯಿತಿ ಇವರ ಸಹಯೋಗದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಭಾಗಮಂಡಲ ಇವರ ಸಹಕಾರದೊಂದಿಗೆ ಅಂಗನ ವಾಡಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ೧೮ ಅಂಗನವಾಡಿ ಕೇಂದ್ರಕ್ಕೆ ಸೇರಿದ ಸುಮಾರು ೭೦ ಮಕ್ಕಳಿಂದ ಛದ್ಮವೇಷ, ಅಭಿಯನ ಗೀತೆ, ನೃತ್ಯ, ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬAಧಿ ಸಿದ ಹಾಡುಗಳು ನೆರವೇರಿತು.
ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಕ್ಕಳ ಹಾಡಿನೊಂದಿಗೆ ಪ್ರಾರಂಭಿಸಿ ಆಟೋಟ ಸ್ಪರ್ಧೆಗಳ ಮೂಲಕ ಉದ್ಘಾಟಿಸಲಾಯಿತು. ಕಪ್ಪೆ ಜಿಗಿತ ಆಟದಲ್ಲಿ ಪ್ರಥಮ ತಾಪ್ಸಿ ಚೇರಂಗಾಲ-೨ ಅಂಗನವಾಡಿ ಕೇಂದ್ರ, ದ್ವಿತೀಯ ಕುಲದೀಪ ತಾವೂರು-೧ ಅಂಗನವಾಡಿ ಕೇಂದ್ರ, ತೃತೀಯ ಸ್ಥಾನ ದಿಶಾಂತ್ ಭಾಗಮಂಡಲ ಅಂಗನವಾಡಿ ಕೇಂದ್ರ ಮಕ್ಕಳು ಪಡೆದರು. ಓಟದ ಸ್ಪರ್ಧೆಯಲ್ಲಿ ಪ್ರಥಮ ಜೆಸ್ಟೀನ್ ಕೋಡಿಮೊಟ್ಟೆ ಅಂಗನವಾಡಿ ಕೇಂದ್ರ, ದ್ವಿತೀಯ ಕುಲದೀಪ ತಾವೂರು-೧ ಅಂಗನಾಡಿ ಕೇಂದ್ರ, ತೃತೀಯ ಸ್ಥಾನ ದಿಶಾಂತ್ ಭಾಗಮಂಡಲ ಅಂಗನವಾಡಿ ಕೇಂದ್ರದ ಮಕ್ಕಳು ಪಡೆದರು. ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಮತ್ತು ಪೋಷಕರಿಗೆ ನಡೆದ ಬಾಲ್ ಪಾಸಿಂಗ್ ಆಟದಲ್ಲಿ ಪ್ರಥಮ ರೇಶ್ಮ ಚೆರಂಡೇಟಿ ಅಂಗನವಾಡಿ ಸಹಾಯ ಕಿಯರು, ದ್ವಿತೀಯ ಪ್ರೀತಿ ಭಾಗ ಮಂಡಲ ಅಂಗನವಾಡಿ ಕೇಂದ್ರಕ್ಕೆ ಸೇರಿದ ಪೋಷಕರು ಪಡೆದು ಕೊಂಡರು. ಕಪ್ಪೆ ಜಿಗಿತದಲ್ಲಿ ಕಲ್ಪನಾ ಚೇರಂಗಾಲ-೨ ಅಂಗನವಾಡಿ ಕೇಂದ್ರಕ್ಕೆ ಸೇರಿದ ಪೋಷಕರು, ಧನ್ಯ ಸಿ.ಎಸ್. ಕೋಡಿಮೊಟ್ಟೆ ಅಂಗನವಾಡಿ ಕೇಂದ್ರಕ್ಕೆ ಸೇರಿದ ಪೋಷಕರು ಪಡೆದು ಕೊಂಡರು, ಕಾರ್ಯಕ್ರಮದಲ್ಲಿ ಭಾಗ ವಹಿಸಿದ ಎಲ್ಲಾ ಮಕ್ಕಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.
ಮೇಪಾಡಂಡ ಸವಿತಾ ಕೀರ್ತನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ೧೯೭೫ ಅಕ್ಟೋಬರ್ ೨ ರಂದು ಪ್ರಾರಂಭವಾದ ಅಂಗನವಾಡಿಯು ಇಂದಿಗೆ ೪೮ ವರ್ಷ ಪೂರ್ಣ ಗೊಂಡಿದ್ದು ಅದರ ಸಂಭ್ರಮಾ ಚರಣೆಯನ್ನು ಯೋಜನೆಯ ಯಶಸ್ವಿಗೆ ಕಾರಣಕರ್ತರಾದ ಕಾರ್ಯಕರ್ತೆಯರು ಹಾಗೂ ಮಕ್ಕಳೊಂದಿಗೆ ಆಚರಿಸು ವುದು ಮುಖ್ಯ ಉದ್ದೇಶವಾಗಿದ್ದು ಯೋಜನೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡದರು.
ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಭಾಗಮಂಡಲ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ, ಸದಸ್ಯರಿಗೂ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಉದ್ಘಾಟನಾ ಭಾಷಣದಲ್ಲಿ ಅಂಗನವಾಡಿ ಕಾರ್ಯ ಕರ್ತೆಯರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಗಂಗಮ್ಮ, ಮುಖೋಪಾಧ್ಯಾಯ ಜನಾರ್ಧನ್ ಪಾಲ್ಗೊಂಡಿದ್ದರು. ಪ್ರಾರ್ಥನೆ ಪ್ರಸಾದಿನಿ ತಣ್ಣಿಮಾನಿ ಅಂಗನವಾಡಿ ಕಾರ್ಯಕರ್ತೆ, ನಿರೂಪಣೆಯನ್ನು ಕೋಡಿಮೊಟ್ಟೆ ಅಂಗನವಾಡಿ ಕಾರ್ಯಕರ್ತೆ ಮಾಲತಿ ಹಾಗೂ ವಂದನಾರ್ಪಣೆಯನ್ನು ಚೆಟ್ಟಿಮಾನಿ ಅಂಗನವಾಡಿ ಕಾರ್ಯಕರ್ತೆ ಸುಶಿ ನಡೆಸಿದರು.