ಮೈಸೂರು ದಸರಾಕ್ಕೆ ಸಂಭ್ರಮದ ಚಾಲನೆ
ಮೈಸೂರು, ಅ. ೧೫: ನಾಡನ್ನು ಆವರಿಸಿದ ಬರಗಾಲ ಮತ್ತು ಕಾವೇರಿ ಹೋರಾಟದ ನಡುವೆಯೇ, ನಗರದ ಚಾಮುಂಡಿ ಬೆಟ್ಟದಲ್ಲಿ ಭಾನುವಾರ ಉದ್ಘಾಟನೆಗೊಂಡ ಸಂಭ್ರಮದ ದಸರಾ ಉತ್ಸವಕ್ಕೆ, ಕನ್ನಡ ಮತ್ತು ಕರ್ನಾಟಕದ ಅಭಿವೃದ್ಧಿಯ ಆಶಯ ಮುನ್ನುಡಿ ಬರೆಯಿತು. ಬರಗಾಲ ಕಳೆದು ಹಿಂಗಾರು ಮಳೆ ಚೆನ್ನಾಗಿ ಆಗಲಿ, ರೈತರಿಗೆ ಉತ್ತಮ ಬೆಳೆ ಸಿಕ್ಕಲಿ' ಎಂಬ ಪ್ರಾರ್ಥನೆಯೂ ಮೂಡಿಬಂತು. ಹತ್ತು ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೀಗೆ ಶುಭಾರಂಭವೂ ದೊರಕಿತು. ಉತ್ಸವಕ್ಕೆ ಚಾಲನೆ ನೀಡಿದ ಸಂಗೀತ ನಿರ್ದೇಶಕ ಹಂಸಲೇಖ, ಕನ್ನಡ, ಕರ್ನಾಟಕದ ಅಭಿವೃದ್ಧಿಗೆ ದಸರಾ ಮುನ್ನುಡಿ ಬರೆಯಲಿ. ಕನ್ನಡ ಶೃತಿಯಾಗಲಿ, ಅಭಿವೃದ್ಧಿ ಕೃತಿಯಾಗಲಿ ಎಂದು ಕರೆ ನೀಡಿದರು. ವೇದಿಕೆಯಲ್ಲಿ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿದ ಚಾಮುಂಡೇಶ್ವರಿ ಪುತ್ಥಳಿಗೆ ಗಣ್ಯರೊಂದಿಗೆ ಹಂಸಲೇಖ ಅವರು ಪುಷ್ಪಾರ್ಚನೆ ಮಾಡುತ್ತಿದ್ದಂತೆ ನೆರೆದ ಸಭಿಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಕವಿಗೋಷ್ಠಿ ಉದ್ಘಾಟನೆ - ಭಗವಾನ್ಗೆ ಕೊಕ್
ಮೈಸೂರು, ಅ. ೧೫: ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದು ಹೇಳುವ ಮೂಲಕ ಒಕ್ಕಲಿಗರ ಆಕ್ರೋಶಕ್ಕೆ ಗುರಿಯಾಗಿರುವ ಪ್ರೊಫೆಸರ್ ಕೆ.ಎಸ್. ಭಗವಾನ್ಗೆ ಇದೀಗ ದಸರಾ ಯುವ ಕವಿಗೋಷ್ಠಿ ಉದ್ಘಾಟನೆಯಿಂದ ಕೊಕ್ ಕೊಡಲಾಗಿದೆ. ಭಗವಾನ್ ಹೇಳಿಕೆಗೆ ಒಕ್ಕಲಿಗ ಸಮುದಾಯ ರೊಚ್ಚಿಗೆದ್ದಿದ್ದು ಬಂಧಿಸುವAತೆ ಆಗ್ರಹಿಸಿದೆ. ಇನ್ನು ರಾಜ್ಯ ಒಕ್ಕಲಿಗರ ಪಡೆಯ ಪ್ರತಿಭಟನೆ ಎಚ್ಚರಿಕೆಗೆ ಮಣಿದಿರುವ ದಸರಾ ಸಮಿತಿ ಯುವ ಕವಿಗೋಷ್ಠಿ ಉದ್ಘಾಟನೆಯಿಂದ ಪ್ರೊ ಭಗವಾನ್ಗೆ ಕೊಕ್ ನೀಡಿದ್ದು ಅವರ ಬದಲಿಗೆ ಸಾಹಿತಿ ಡಾ. ಡಿ.ಕೆ. ರಾಜೇಂದ್ರ ಅವರಿಂದ ಉದ್ಘಾಟನೆ ಮಾಡಿಸಲಾಗಿದೆ. ಮೈಸೂರಿನಲ್ಲಿ ನಡೆದ ಮಹಿಷ ಉತ್ಸವದಲ್ಲಿ ಮಾತನಾಡಿದ್ದ ಭಗವಾನ್, ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದು ಕುವೆಂಪು ಹೇಳಿದ್ದಾರೆ ಎನ್ನುವ ಮೂಲಕ ಹೊಸ ವಿವಾದಕ್ಕೆ ಗುರಿಯಾಗಿದ್ದರು. ಭಗವಾನ್ ಹೇಳಿಕೆ ಖಂಡಿಸಿ, ಒಕ್ಕಲಿಗ ಸಮುದಾಯವನ್ನು ಕೆರಳಿಸಿದ್ದು, ರಸ್ತೆಗಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಇಸ್ರೇಲ್ ವೈಮಾನಿಕ ದಾಳಿ-ಹಮಾಸ್ನ ಕಮಾಂಡರ್ ಸಾವು
ಗಾಜಾಪಟ್ಟಿ, ಅ. ೧೫: ಇಸ್ರೇಲ್ ವೈಮಾನಿಕ ದಾಳಿಯ ಸಮಯದಲ್ಲಿ ಹಮಾಸ್ನ ಹಿರಿಯ ಕಮಾಂಡರ್ ರೊಬ್ಬರು ಹತ್ಯೆಯಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ. ನುಖ್ಬಾ ಘಟಕದ ದಕ್ಷಿಣ ಖಾನ್ ಯೂನಿಸ್ ಬೆಟಾಲಿಯನ್ ಎಂದು ಕರೆಯಲ್ಪಡುವ ಕಮಾಂಡರ್ ಬಿಲ್ಲಾಲ್ ಅಲ್-ಖೆದ್ರಾ ಅವರನ್ನು ಶಿನ್ ಬೆಟ್ ಭದ್ರತಾ ಸಂಸ್ಥೆ ಮತ್ತು ಮಿಲಿಟರಿ ಗುಪ್ತಚರ ನಿರ್ದೇಶನಾಲಯದ ಗುಪ್ತಚರ ಪ್ರಯತ್ನಗಳ ನಂತರ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ. ಈತ ಕಳೆದ ವಾರಾಂತ್ಯದಲ್ಲಿ ನಿರಿಮ್ ಮತ್ತು ನಿರ್ ಓಝ್ ದಕ್ಷಿಣ ಸಮುದಾಯಗಳ ಮೇಲೆ ದಾಳಿಯ ನೇತೃತ್ವ ವಹಿಸಿದ್ದ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಕಿಬ್ಬುಟ್ಜ್ ನಿರಿಮ್ ಮತ್ತು ನಿರ್ ಓಜ್ನಲ್ಲಿನ ಬರ್ಬರ ದಾಳಿಗೆ ಆತ ಕಾರಣನಾಗಿದ್ದ ಎಂದು ಇಸ್ರೇಲ್ ರಕ್ಷಣಾ ಪಡೆ ಮಾಹಿತಿ ನೀಡಿದೆ. ಗಾಜಾ ಪಟ್ಟಿಯಲ್ಲಿ ರಾತ್ರಿಯಿಡೀ ನಡೆದ ವೈಮಾನಿಕ ದಾಳಿಯಲ್ಲಿ ಇನ್ನೂ ಹಲವಾರು ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕರು ಹತರಾಗಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಹಮಾಸ್ ಕಮಾಂಡ್ ಕೇಂದ್ರಗಳು, ಮಿಲಿಟರಿ ಕಾಂಪೌAಡ್ಗಳು, ರಾಕೆಟ್ ಲಾಂಚರ್ಗಳು, ಟ್ಯಾಂಕ್ ವಿರೋಧಿ ಕ್ಷಿಪಣಿ ಉಡಾವಣಾ ಪೋಸ್ಟ್ಗಳು ಮತ್ತು ವೀಕ್ಷಣಾ ಪೋಸ್ಟ್ಗಳು ಸೇರಿದಂತೆ ೧೦೦ಕ್ಕೂ ಹೆಚ್ಚು ಕಡೆಗಳಲ್ಲಿ ಇಸ್ರೇಲ್ ರಕ್ಷಣಾ ಪಡೆ ಭಾನುವಾರ ರಾತ್ರಿಯಿಡೀ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ೨ ಕಡೆಗಳಲ್ಲಿ ಭಾರಿ ಅಗ್ನಿ ಅವಘಡ
ಬೆಂಗಳೂರು, ಅ. ೧೫: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಬೆಂಕಿ ಅವಘಡಗಳಲ್ಲಿ ೧೩ ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿವೆ. ಎರಡೂ ಘಟನೆಗಳಿಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಈ ಎರಡೂ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚೋಳೂರುಪಾಳ್ಯದಲ್ಲಿ ಶನಿವಾರ ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು ೨೦ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಕಾರ್ಖಾನೆಯು ವಿಜಯನಗರದ ಪೈಪ್ಲೈನ್ ರಸ್ತೆಯ ೭ನೇ ಕ್ರಾಸ್ನಲ್ಲಿದ್ದು, ಬಾಲಚಂದ್ರ ಎಂಬುವವರಿಗೆ ಸೇರಿದ್ದಾಗಿದೆ. ಕಾರ್ಖಾನೆಯನ್ನು ವಿಜಯ್ ರೇ ಮತ್ತು ಕಾಂತಿ ಲಾಲ್ ಎಂಬುವವರಿಗೆ ಬಾಡಿಗೆಗೆ ನೀಡಲಾಗಿತ್ತು. ಮೊದಲಿಗೆ ಕಾರ್ಖಾನೆ ಹೊರಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಪೈಕಿ ಒಂದಕ್ಕೆ ಬೆಂಕಿ ಹೊತ್ತಿಕೊಂಡಿದೆ. ನಂತರ ಇತರ ವಾಹನಗಳಿಗೂ ವ್ಯಾಪಿಸಿ ಎಂಟು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಮೂರು ಅಗ್ನಿಶಾಮಕ ವಾಹನಗಳ ಸತತ ಪ್ರಯತ್ನದಿಂದ ಬೆಂಕಿಯನ್ನು ಹತೋಟಿಗೆ ತರಲಾಯಿತು. ಇದೇ ದಿನ ಇನ್ನೊಂದು ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲಗ್ಗೆರೆಯ ಚಾಮುಂಡಿನಗರದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದಲ್ಲಿ ನಿಲ್ಲಿಸಿದ್ದ ಐದು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ.
ಕಾಶ್ಮೀರದ ಜನರ ಜೀವನೋಪಾಯಕ್ಕೆ ಆಪತ್ತು ಆತಂಕ
ಶ್ರೀನಗರ, ಅ. ೧೫: ಜಮ್ಮು ಮತ್ತು ಕಾಶ್ಮೀರದಲ್ಲಿರುವ ಹಿಮನದಿಗಳು ಕ್ಷಿಪ್ರಗತಿಯಲ್ಲಿ ಕರಗುತ್ತಿವೆ. ಇದು ಹಿಮಾಲಯ ಪ್ರದೇಶದಲ್ಲಿ ನೀರಿನ ಲಭ್ಯತೆ ಹಾಗೂ ಜನರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ ಎಂದು ಭೂವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಹಿಂದೂ ಕುಶ್ ಪ್ರದೇಶದಲ್ಲಿ ವಿಸ್ತಾರವಾದ ಹಿಮನದಿಗಳಿವೆ. ಈ ಪೈಕಿ ಕಾಶ್ಮೀರದಲ್ಲಿರುವ ಕೊಲಹೊಯ್ ಅತಿದೊಡ್ಡದಾಗಿದೆ. ಝೀಲಂ ನದಿಗೆ ಇದೇ ನೀರಿನ ಮೂಲವಾಗಿದೆ. ಆದರೆ, ೧೯೬೨ರಿಂದ ಈ ಹಿಮನದಿಯು ಸಣ್ಣ ಭಾಗಗಳಾಗಿ ಛಿದ್ರಗೊಂಡಿದ್ದು, ಶೇ. ೨೩ರಷ್ಟು ವಿಸ್ತೀರ್ಣ ಕುಗ್ಗಿದೆ ಎಂದು ಅಧ್ಯಯನವೊಂದು ಹೇಳಿದೆ. ಹಿಮನದಿಯ ಸುತ್ತಮುತ್ತ ತಾಪಮಾನ, ಅರಣ್ಯ ನಾಶ ಹೆಚ್ಚಳ ಸೇರಿದಂತೆ ಮಾನವ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿವೆ. ವಾಹನಗಳು ಮತ್ತು ಸಿಮೆಂಟ್ ಘಟಕಗಳಿಂದ ಹೊರಸೂಸುವ ಮಾಲಿನ್ಯವು ಇದರ ಕರಗುವಿಕೆಗೆ ಮೂಲ ಕಾರಣವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು. ಕಾಶ್ಮೀರದ ಶೇ. ೭೦ರಷ್ಟು ಜನರ ಜೀವನೋಪಾಯವು ಕೃಷಿ ಚಟುವಟಿಕೆ ಮೇಲೆ ಅವಲಂಬಿತವಾಗಿದೆ. ಬಹುತೇಕ ಪ್ರದೇಶಗಳಲ್ಲಿ ಬೇಸಾಯ ಭೂಮಿಗೆ ಈ ಹಿಮನದಿಗಳೇ ನೀರಿನ ಆಕರಗಳಾಗಿವೆ. ಹಾಗಾಗಿ, ಹಿಮ ಕರಗುವಿಕೆಯು ಈ ಪ್ರದೇಶದ ಜನರ ಸಾಮಾಜಿಕ ಹಾಗೂ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಚೌಹಾಣ್ ವಿರುದ್ಧ ವಿಕ್ರಮ್ ಮಸ್ತಲ್ ಕಣಕ್ಕೆ
ಭೋಪಾಲ್, ಅ. ೧೫: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಮೂಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ೧೪೪ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ೧೩೬ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ರಾಮಾಯಣದಲ್ಲಿ ಹನುಮಾನ್ ಪಾತ್ರ ನಿರ್ವಹಿಸಿ ಜನಪ್ರಿಯತೆಗಳಿಸಿದ್ದ ವಿಕ್ರಮ್ ಮಸ್ತಲ್ ಅವರನ್ನು ಬುದ್ಧಿ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿದ್ದು, ಆ ಮೂಲಕ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತೀವ್ರ ಪೈಪೋಟಿ ನೀಡಲು ನಿರ್ಧರಿಸಿದೆ. ವಿಕ್ರಮ್ ಮಸ್ತಲ್ ಇದೇ ಜುಲೈನಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. ಬುದ್ದಿ ವಿಧಾನಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. ಚೌಹಾಣ್ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ೨೦೧೮ರ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಅರುಣ್ ಯಾದವ್ ಅವರನ್ನು ೫೮,೯೯೯ ಮತಗಳ ಅಂತರದಿAದ ಸೋಲಿಸಿದ್ದರು. ಚೌಹಾಣ್ ಅವರಿಗೆ ಪ್ರಬಲ ಪೈಪೋಟಿ ಒಡ್ಡಲು ಕಾಂಗ್ರೆಸ್ ನಿರ್ಧರಿಸಿದ್ದು, ವಿಕ್ರಮ್ ಮಸ್ತಲ್ ಅವರನ್ನು ಕಣಕ್ಕಿಳಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನವೆಂಬರ್ ೧೭ ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ ೩ರಂದು ಮತ ಎಣಿಕೆ ನಡೆಯಲಿದೆ.