ಕೂಡಿಗೆ, ಅ. ೧೩: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಸಂಘದ ಸಭಾಂಗಣದಲ್ಲಿ ನಡೆಯಿತು. ೧೨ ಮಂದಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ನಾಗರಾಜ್, ರಾಮಚಂದ್ರ, ಕೃಷ್ಣಗೌಡ, ಕುಮಾರ್, ಅರುಣ್ ಕುಮಾರ್, ಸಾಲಗಾರ ಮಹಿಳಾ ಕ್ಷೇತ್ರದಿಂದ ಕೆ.ಕೆ. ಪವಿತ್ರ ಮತ್ತು ಜಯಶ್ರೀ ಆಯ್ಕೆಯಾದರು.
ಸಾಲಗಾರ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಎಸ್.ಆರ್. ಅರುಣ್ ರಾವ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ರಮೇಶ್, ಸಾಲಗಾರ ಹಿಂದುಳಿದ ವರ್ಗ "ಬಿ," ಕ್ಷೇತ್ರದಿಂದ ಕೆ.ಪಿ. ರಾಜು, ಸಾಲಗಾರರ ಹಿಂದುಳಿದ ವರ್ಗ "ಎ" ಕ್ಷೇತ್ರದಿಂದ ಎಸ್.ಎಸ್. ಕೃಷ್ಣ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ವಿ. ಬಸಪ್ಪ ಗೆಲುವು ಸಾಧಿಸಿದರು. ಒಟ್ಟು ೨೮ ಅಭ್ಯರ್ಥಿಗಳು ಸ್ಪರ್ಧಿಸಿದರು. ಚುನಾವಣೆಯ ಮತಚಲಾಯಿಸಲು ೧೯೧೪ ಸಾಲಗಾರ ಸದಸ್ಯರು ಮತ್ತು ೭೫೦ ಸಾಲಗಾರರಲ್ಲದ ಸದಸ್ಯರು ಅರ್ಹರಾಗಿದ್ದರು. ಇದರಲ್ಲಿ ೧೬೮೨ ಸದಸ್ಯರು ಚುನಾವಣೆಯಲ್ಲಿ ಮತದಾನ ಚಲಾಯಿಸಿದರು. ೧೩ ಮಂದಿ ಆಡಳಿತ ಮಂಡಳಿಯ ಸಮಿತಿಯಲ್ಲಿ ಓರ್ವ ನಿರ್ದೇಶಕರಾಗಿ ನಿಕಟಪೂರ್ವ ಅಧ್ಯಕ್ಷ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ೧೨ ಸ್ಥಾನಗಳಿಗೆ, ಚುನಾವಣೆ ನಡೆಯಿತು.
ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆ ಅಧಿಕಾರಿ ಪಿ.ಬಿ. ಮೋಹನ್ ಕಾರ್ಯನಿರ್ವಹಿಸಿದರು.