ಗೋಣಿಕೊಪ್ಪಲು, ಅ. ೧೩ : ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿರುವ ವಾಣಿಜ್ಯ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಬಿಸಾಕಿ ತೆರಳುತ್ತಿರುವವರ ಮೇಲೆ ಹದ್ದಿನ ಕಣ್ಣಿಡಲು ಇದೀಗ ಗೋಣಿಕೊಪ್ಪಲುವಿನ ಗ್ರಾಮ ಪಂಚಾಯಿತಿಯು ನಗರದ ನಾಲ್ಕು ದಿಕ್ಕುಗಳಲ್ಲಿ ಅತ್ಯಾಧುನಿಕ ಮಾದರಿಯ ದಿನದ ೨೪ ಗಂಟೆ ಕೆಲಸ ನಿರ್ವಹಿಸುವ ೩೬೦ಡಿಗ್ರಿ ಸುತ್ತುವ ಸೋಲಾರ್ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಪ್ರಮುಖ ರಸ್ತೆ ಬದಿಯಲ್ಲಿ ಕಸವನ್ನು ಬಿಸಾಡಿ ತೆರಳುತ್ತಿರುವವರ ಮೇಲೆ ನಿಗಾ ವಹಿಸಲು ವಿನೂತನ ಕ್ರಮಕ್ಕೆ ಮುಂದಾಗಿದೆ.
ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ, ಅಂಗಡಿ ಮಳಿಗೆ ಕಳ್ಳತನ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆ ತಡೆ, ಎಲ್ಲೆಂದರಲ್ಲಿ ಕಸವನ್ನು ಎಸೆದು ತೆರಳುತ್ತಿರುವುದು ಇತ್ತೀಚಿನ ದಿನದಲ್ಲಿ ಹೆಚ್ಚಾಗಿದೆ. ಇದನ್ನು ಹತೋಟಿಗೆ ತರಲು ಗೋಣಿಕೊಪ್ಪ ಗ್ರಾಮ ಪಂಚಾಯಿತಿಯು ಆಡಳಿತ ಮಂಡಳಿ ಸಭೆಯಲ್ಲಿ ಒಮ್ಮತದ ನಿರ್ಧಾರಗಳನ್ನು ಕೈಗೊಂಡು ಹಲವೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ನಿರ್ಧಾರ ಕೈಗೊಂಡಿದೆ.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಬಾಲು ಈಗಾಗಲೇ ಅತ್ಯಾಧುನಿಕ ಮಾದರಿಯ ೫ ಸಿಸಿ ಕ್ಯಾಮರಾಗಳನ್ನು ೪ ಪ್ರಮುಖ ದಿಕ್ಕುಗಳಲ್ಲಿ ಅಳವಡಿಸಲಾಗಿದೆ. ಸಿಸಿ ಕ್ಯಾಮರಾವು ದಿನದ ೨೪ ಗಂಟೆ ಕಾರ್ಯ ನಿರ್ವಹಿಸಲಿದ್ದು ೩೬೦ ಡಿಗ್ರಿ ಸೋಲಾರ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ನಗರಕ್ಕೆ ಆಗಮಿಸುವ ಹೊರಗಿನ ಜನತೆ ವಾಹನಗಳಲ್ಲಿ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದು ಪಂಚಾಯಿತಿ ಗಮನಕ್ಕೆ ಬಂದಿದ್ದು ಇವುಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲಾಗಿದೆ. ನಗರ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ
(ಮೊದಲ ಪುಟದಿಂದ) ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿ ಕ್ಯಾಮರವೂ ಬಹುಮುಖ್ಯ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ಸಿಸಿ ಕ್ಯಾಮರಾಗಳ ಕಾರ್ಯನಿರ್ವಹಣೆಯನ್ನು ಸ್ಥಳೀಯ ಪೊಲೀಸ್ ಠಾಣೆಯ ಠಾಣಾಧಿಕಾರಿ ಗಳು ವೀಕ್ಷಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇದರ ವಿವರ ಪಡೆಯಬಹುದಾಗಿದೆ. ಅಧ್ಯಕ್ಷರ ಹಾಗೂ ಸದಸ್ಯರ ಮೊಬೈಲ್ನಲ್ಲಿ ಇಲ್ಲಿನ ವಿದ್ಯಮಾನ ಗಳನ್ನು ಪರೀಕ್ಷಿಸಬಹುದಾಗಿದೆ. ಕೂಡ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಕಸ ವಿಲೇವಾರಿ ವಾಹನಗಳು ವಾರ್ಡ್ಗಳಿಗೆ ತೆರಳುತ್ತಿದ್ದು ನಾಗರಿಕರು ತ್ಯಾಜ್ಯವನ್ನು ವಿಂಗಡಿಸಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ಪಂಚಾಯಿತಿ ಸಿಬ್ಬಂದಿ ಬರುವ ವೇಳೆ ವಾಹನಗಳಿಗೆ ನೀಡಬೇಕು ಹಾಗೂ ಪಂಚಾಯಿತಿಯ ಅಭಿವೃದ್ಧಿ ಕಾರ್ಯಕ್ಕೆ ನಾಗರಿಕರು ಸದಾ ಸ್ಪಂದಿಸಬೇಕು ಎಂದರು.
ಬಸ್ ನಿಲ್ದಾಣದ ಬಳಿ ಸಾರ್ವಜನಿಕರು ನಡೆದಾಡುವ ಜಾಗದಲ್ಲಿ ಹಣ್ಣು ಹಂಪಲುಗಳ ವ್ಯಾಪಾರದಿಂದ ಹಾಗೂ ರಸ್ತೆ ಬದಿಯಲ್ಲಿ ವಾಹನಗಳಲ್ಲಿ ವ್ಯಾಪಾರ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಹಲವು ಬಾರಿ ಪಂಚಾಯಿತಿ ಸಿಬ್ಬಂದಿಗಳು ಮಾಹಿತಿ ನೀಡಿದರೂ ಮತ್ತೆ ರಸ್ತೆ ಬದಿಯಲ್ಲಿ ವಾಹನಗಳಲ್ಲಿ ವ್ಯಾಪಾರ ನಡೆಸುತ್ತಿರುವುದು ಕಂಡು ಬಂದಿದೆ. ಪೊಲೀಸರು ಈ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಸೌಮ್ಯ ಬಾಲು ಆಗ್ರಹಿಸಿದರು.
ಗ್ರಾಮ ಪಂಚಾಯಿತಿಯ ಹಿರಿಯ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ ಈ ಹಿಂದೆ ಹಲವು ಬಾರಿ ಮನವಿ ಮಾಡಿದರೂ ಕಸವನ್ನು ರಸ್ತೆಯ ಬದಿಯಲ್ಲಿ ಬಿಸಾಡುವುದನ್ನು ಗಮನಿಸಿ ಆರಂಭಿಕ ಹಂತದಲ್ಲಿ ೫ ಸೋಲಾರ್ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಕಸವನ್ನು ರಸ್ತೆ ಬದಿಯಲ್ಲಿ ಬಿಸಾಕುವುದು ಕಂಡು ಬಂದಲ್ಲಿ ಅಂತಹವರ ಮೇಲೆ ಪಂಚಾಯಿತಿ ನಿಯಮಾನುಸಾರ ಕಠಿಣ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಈಗಾಗಲೇ ೪ ದಿಕ್ಕುಗಳಲ್ಲಿ ಸಂಪೂರ್ಣ ಕಸಮುಕ್ತವಾಗಿ ಮಾಡಲಾಗಿದೆ. ಕಸವನ್ನು ಬಿಸಾಡುವುದು ಸಾಭೀತಾದಲ್ಲಿ ಅಂತÀವರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲಾಗುತ್ತದೆ. ಸಾರ್ವಜನಿಕರು ಇಂತಹ ಪ್ರಕರಣಗಳಿಗೆ ಅವಕಾಶ ಮಾಡಿಕೊಡದಂತೆ ಮನವಿ ಮಾಡುತ್ತಿದ್ದೇವೆ. ಮುಂದಿನ ದಿನದಲ್ಲಿ ಇನ್ನಷ್ಟು ಸೋಲಾರ್ ಕ್ಯಾಮರಾಗಳನ್ನು ಅಳವಡಿಸುವ ಯೋಜನೆ ಪಂಚಾಯಿತಿಯ ಮುಂದಿದೆ ಎಂದರು.
ಸಿಸಿ ಕ್ಯಾಮೆರಾ ಅಳವಡಿಕೆಯಿಂದ ರಸ್ತೆಯಲ್ಲಿ ಸಂಭವಿಸಬಹುದಾದ ಅಪಘಾತಗಳು ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳನ್ನು ಕಂಡು ಹಿಡಿಯಲು ಪೊಲೀಸರಿಗೆ ಸಹಾಯ ವಾಗಿದೆ. ಬೆಳೆಯುತ್ತಿರುವ ನಗರಗಳಲ್ಲಿ ಜನರ ಸುರಕ್ಷತಾ ದೃಷ್ಟಿಯಿಂದ ಹಾಗೂ ಅಪರಾಧ ಪತ್ತೆ ಹಚ್ಚಲು ಪೊಲೀಸರಿಗೆ ಇದರಿಂದ ಹೆಚ್ಚಿನ ಸಹಕಾರಿಯಾಗಲಿದೆ ಎಂಬುದನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಕೊಣಿಯಂಡ ಬೋಜಮ್ಮ, ನೂರೆರ ರತಿ ಅಚ್ಚಪ್ಪ, ಕೆ.ರಾಜೇಶ್ ಹಾಗೂ ಚೈತ್ರ ಬಿ.ಚೇತನ್ ಉಪಸ್ಥಿತರಿದ್ದರು.
-ಹೆಚ್.ಕೆ. ಜಗದೀಶ್