ಕುಶಾಲನಗರ, ಅ.೧೩: ಮನೆಯಿಂದ ಏಕಾಏಕಿ ನಾಪತ್ತೆಯಾದ ಮಗುವೊಂದನ್ನು ಕುಶಾಲನಗರ ಪೊಲೀಸರು ಅರ್ಧ ಗಂಟೆಯ ಒಳಗೆ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾದ ಪ್ರಕರಣ ಶುಕ್ರವಾರ ಬೆಳಿಗ್ಗೆ ಕುಶಾಲನಗರದಲ್ಲಿ ನಡೆದಿದೆ

ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆಯ ನಿವಾಸಿ ಉಕ್ರಂ ಪಾಶ ಎಂಬವರ ಮೂರು ವರ್ಷದ ಪುಟ್ಟ ಮಗು ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ನಾಪತ್ತೆಯಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿತ್ತು.

ತಾಯಿ ಮಗುವನ್ನು ಮನೆಯಲ್ಲಿ ಬಿಟ್ಟು ಪಕ್ಕದ ಮನೆಗೆ ಹೋಗಿ ಬರುವಷ್ಟರಲ್ಲಿ ಮಗು ಕಾಣದೆ ಇಡೀ ಕುಟುಂಬ ಹುಡುಕಾಟದಲ್ಲಿ ತೊಡಗಿದೆ.

ಮಾಹಿತಿ ದೊರೆತ ಕುಶಾಲನಗರ ಪಟ್ಟಣ ಠಾಣೆಯ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಾದ ಚಂದ್ರಶೇಖರ್ ನರೇಗಲ್, ದಿವ್ಯ, ಸಂದೀಪ್ ರೈ ಮತ್ತು ಸಿಬ್ಬಂದಿಗಳು ಸಾರ್ವಜನಿಕ ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಬಸ್ ನಿಲ್ದಾಣಗಳಲ್ಲಿ ಪೊಲೀಸ್ ವಾಹನದ ಮೈಕ್ ಬಳಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭ ಪುಟಾಣಿ ಮಗು ತಾಹಿರ್ ಪಾಷಾ ಕುಶಾಲನಗರ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಕಂಡು ಬಂದು ತಕ್ಷಣ ಪೊಲೀಸ್ ವಾಹನದಲ್ಲಿ ಕೂರಿಸಿ ಪೋಷಕರಿಗೆ ಒಪ್ಪಿಸುವಲ್ಲಿ ಪೊಲೀಸ್ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಮಗು ಮನೆಯಿಂದ ತಾಯಿಯನ್ನು ಹುಡುಕಿ ರಸ್ತೆ ಬದಿಯಲ್ಲಿ ಹೋಗಿ ಸರಕಾರಿ ಬಸ್ ನಿಲ್ದಾಣಕ್ಕೆ ಸೇರಿ ನಂತರ ಮನೆಗೆ ಕ್ಷೇಮವಾಗಿ ತಲುಪಿದ ಘಟನೆಯಿಂದ ಕುಟುಂಬ ನಿಟ್ಟುಸಿರು ಬಿಟ್ಟರು.

- ಸಿಂಚು