ಸೋಮವಾರಪೇಟೆ, ಅ.೧೩ : ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದ ಶ್ರೀ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ಆಯೋಜನೆ ಗೊಂಡಿರುವ ಶರನ್ನವರಾತ್ರಿ ಉತ್ಸವಕ್ಕೆ ತಾ. ೧೫ರಂದು ಬೆಳಿಗ್ಗೆ ೭ ಗಂಟೆಗೆ ಚಾಲನೆ ನೀಡಲಾಗುವುದು ಎಂದು ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. ೧೫ರಿಂದ (ನಾಳೆಯಿಂದ) ತಾ. ೨೪ರವರೆಗೆ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ ನಡೆಯಲಿದ್ದು, ತಾ. ೧೫ರಂದು ಬೆಳಿಗ್ಗೆ ೭ ಗಂಟೆಗೆ ಶ್ರೀದೇವಿಯ ವಿಗ್ರಹವನ್ನು ಮೆರವಣಿಗೆ ಮೂಲಕ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದರು.
ಪ್ರತಿದಿನ ಶಕ್ತಿ ಪಾರ್ವತಿಗೆ ಅಭಿಷೇಕ, ಲಲಿತ ಸಹಸ್ರನಾಮ, ಕುಂಕುಮಾರ್ಚನೆ, ರಂಗಪೂಜೆ, ಮಹಮಂಗಳಾರತಿ ನಡೆಯಲಿದೆ. ಇದರೊಂದಿಗೆ ಹೂವು, ಏಲಕ್ಕಿ, ಮುತ್ತಿನ ಅಲಂಕಾರ ನಡೆಯಲಿದ್ದು, ತಾ. ೧೮ರಂದು ಕಾವೇರಿ ಮಾತೆ ಅಲಂಕಾರ ಮಾಡಲಾಗುವುದು. ನಂತರ ಮಯೂರವಾಹಿನಿ, ಮಧುರೆ ಮೀನಾಕ್ಷಿ, ವೀಳ್ಯದೆಲೆ, ನಿಂಬೆಹಣ್ಣು, ಅಡಿಕೆ, ಬೆಳ್ಳಿ ಆಭರಣಗಳ ಅಲಂಕಾರದೊAದಿಗೆ ಪ್ರತಿದಿನ ವಿಶೇಷ ಪೂಜೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.
ತಾ. ೨೨ರಂದು ದೇವಾಲಯದಲ್ಲಿ ದುರ್ಗಾಹೋಮ, ಪೂರ್ಣಾಹುತಿ, ಅನ್ನಸಂತರ್ಪಣೆ ನಡೆಯಲಿದೆ. ತಾ.೨೪ರಂದು ಬೆಳಿಗ್ಗೆ ೧೦ ರಿಂದ ೧೧ರವರೆಗೆ ದೇವಿಗೆ ಸೌಲಕ್ಕಿ ಕಾರ್ಯಕ್ರಮ ನೆರವೇರಲಿದ್ದು, ಮಧ್ಯಾಹ್ನ ೨ ಗಂಟೆಗೆ ದೇವಿಯ ವಿಗ್ರಹವನ್ನು ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಆನೆ ಕೆರೆ ಬಳಿಯಲ್ಲಿ ಬನ್ನಿ ಕಡಿದು ನಂತರ ವಿಸರ್ಜಿಸಲಾಗುವುದು. ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ, ಕಲಾತಂಡಗಳು ಭಾಗವಹಿಸಲಿವೆ ಎಂದರು.
ಗೋಷ್ಠಿಯಲ್ಲಿ ದೇವಾಲಯ ಸಮಿತಿ ಕಾರ್ಯದರ್ಶಿ ಎಸ್.ಡಿ. ವಿಜೇತ್, ಖಜಾಂಚಿ ಯಡೂರು ಹರೀಶ್, ನಿರ್ದೇಶಕರಾದ ಸತೀಶ್, ರಾಜೇಶ್ ಪದ್ಮನಾಭ ಉಪಸ್ಥಿತರಿದ್ದರು.