ಗೋಣಿಕೊಪ್ಪಲು, ಅ. ೧೩: ೪೫ನೇ ವರ್ಷದ ಶ್ರೀ ಕಾವೇರಿ ದಸರಾ ಸಮಿತಿಯ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ತಾ. ೧೫ ಹಾಗೂ ೧೬ ರಂದು ನಗರದ ಕಾವೇರಿ ಕಲಾ ವೇದಿಕೆಯ ಸಮೀಪವಿರುವ ಮೈದಾನದಲ್ಲಿ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟವು ಶಿವಾಜಿ ಸೇನೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.

೨ನೇ ವರ್ಷದ ಕಬಡ್ಡಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಲು ಸಿದ್ಧತೆಗಳು ಆರಂಭವಾಗಿದ್ದು ಸ್ಥಳೀಯ ಉಮಾಮಹೇಶ್ವರಿ ದೇವಾಲಯದಲ್ಲಿ ಶಿವಾಜಿ ಸೇನೆಯ ಅಧ್ಯಕ್ಷರಾಗಿರುವ ಎಲ್.ಎನ್. ಅಣ್ಣಪ್ಪ ಮುಂದಾಳತ್ವದಲ್ಲಿ ಪೂಜಾ ಕಾರ್ಯ ನೆರವೇರಿತು. ೨ ದಿನಗಳ ಕಾಲ ನಡೆಯುವ ಪಂದ್ಯಾಟವು ಯಶಸ್ವಿಯಾಗುವ ನಿಟ್ಟಿನಲ್ಲಿ ಸಮಿತಿಯ ಪದಾಧಿಕಾರಿಗಳು ಈಗಾಗಲೇ ಮೈದಾನವನ್ನು ಅಣಿಗೊಳಿಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೨ನೇ ವರ್ಷದ ಅಂಗವಾಗಿ ಸಮಿತಿಯ ಪದಾಧಿಕಾರಿಗಳು ಟಿ ಶರ್ಟ್ಗಳನ್ನು ಬಿಡುಗಡೆಗೊಳಿಸಿದರು.

ಈ ಬಾರಿ ರಾಜ್ಯದ ವಿವಿಧ ಭಾಗದಿಂದ ೨೦ ತಂಡಗಳು ಭಾಗವಹಿಸಲಿದ್ದು ೨ ದಿನಗಳ ಕಾಲ ಪಂದ್ಯಾಟ ನಡೆಯಲಿದೆ. ತಾ. ೧೫ರಂದು ಬೆಳಿಗ್ಗೆ ಪಂದ್ಯಾವಳಿಯನ್ನು ಗಣ್ಯರು ಉದ್ಘಾಟಿಸಲಿದ್ದು, ತಾ. ೧೬ರಂದು ಸಂಜೆಯ ವೇಳೆ ಸಮಾರೋಪ ಸಮಾರಂಭವು ನಡೆಯಲಿದೆ. ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ೨ ದಿನಗಳ ಕಾಲ ಮಧ್ಯಾಹ್ನದ ವೇಳೆ ನಾಗರಿಕರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಅಧ್ಯಕ್ಷ ಎ.ಎನ್. ಅಣ್ಣಪ್ಪ ತಿಳಿಸಿದರು.

ಸಮಿತಿಯ ಉಪಾಧ್ಯಕ್ಷ ಸಿಂಗಿ ಸತೀಶ್ ಮಾತನಾಡಿ, ಗ್ರಾಮೀಣ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ದಸರಾ ಜನೋತ್ಸವ ಅಂಗವಾಗಿ ಕಬಡ್ಡಿ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗೂ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದರು. ಈ ವೇಳೆ ಸಮಿತಿಯ ಪದಾಧಿಕಾರಿಗಳಾದ ಎ.ಜಿ.ಸುರೇಶ್, ಜಿ.ಪಿ.ಸ್ವಾಮಿ, ಡಿ.ಎ.ವಿನೋದ್, ರಾಜೇಶ್ ರೈ,ವಿದ್ವನ್ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು. -ಹೆಚ್.ಕೆ.ಜಗದೀಶ್