ಮಡಿಕೇರಿ, ಅ. ೧೩: ಕ್ಯಾಂಟರ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತಪಟ್ಟ ಧಾರುಣ ಘಟನೆ ನಗರದ ಮಡಿಕೇರಿ-ಕುಶಾಲನಗರ ಮಾರ್ಗಮಧ್ಯೆ ನಡೆದಿದೆ.
ಮೂಲತಃ ಕೆ.ಆರ್. ನಗರದ ಬೈರವ (೩೦) ಮೃತ ದುರ್ದೈವಿ. ಮಡಿಕೇರಿಯಿಂದ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕೆಎ-೫೫-ಇಎ-೮೭೭೯ ನೋಂದಣಿಯ ಬೈಕ್ ಇಬ್ಬನಿ ರೆಸಾರ್ಟ್ ಸಮೀಪ ತೆರಳುತ್ತಿದ್ದ ಸಂದರ್ಭ ಮುಂಭಾಗದಲ್ಲಿದ್ದ ಕಾರೊಂದು ದಿಢೀರ್ ಆಗಿ ಬ್ರೇಕ್ ಹಾಕಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಸವಾರ ಕಾರಿನ ಹಿಂಬದಿಗೆ ಡಿಕ್ಕಿಪಡಿಸಿದ್ದಾನೆ.
ಪರಿಣಾಮ ಬೈಕ್ ಸಮೇತ ರಸ್ತೆಯ ಬಲಬದಿಗೆ ಬಿದ್ದಿದ್ದಾನೆ. ಅದೇ ಸಂದರ್ಭ ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕ್ಯಾಂಟರ್ನ ಹಿಂಬದಿಯ ಚಕ್ರ ಸವಾರನ ತಲೆ ಮೇಲೆ ಹರಿದಿದೆ. ಇದರಿಂದ ತೀವ್ರ ರಕ್ತ ಸ್ರಾವಗೊಂಡು, ಹೆಲ್ಮೆಟ್ ಧರಿಸದ ಕಾರಣ ಮಿದುಳು ಹೊರಬಂದ ಪರಿಣಾಮ ಸ್ಥಳದಲ್ಲಿಯೇ ಸವಾರ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿದೆ.