‘ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿಂ ಕುರು’ ಭಾರತ ದೇಶದ ಏಳು ಪವಿತ್ರ ನದಿಗಳೊಡನೆ ಕಾವೇರಿಯನ್ನು ಪ್ರಾತಃಕಾಲದಲ್ಲಿ ಧ್ಯಾನಿಸುತ್ತಾ ಶುಭಸ್ನಾನ ಮಾಡುವುದು ಪದ್ಧತಿ. ಅಂತೆಯೇ ಕೊಡಗಿನ ಜನತೆಯ ಪ್ರಾತಃಸ್ಮರಣಿಯಳೂ, ಕುಲದೇವತೆಯೂ ಹೌದು. ಆದರೆ ಕಾವೇರಿ ನದಿ ನೀರಿನ ವಿಷಯವಾಗಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ನಡೆಯುತ್ತಿರುವ ಘರ್ಷಣೆ ಇಂದು ನಿನ್ನೆಯದಲ್ಲ. ಇದಕ್ಕೆ ಸರಿಸುಮಾರು ಸಾವಿರ ವರ್ಷಗಳ ಇತಿಹಾಸವಿದೆ. ತಮಿಳುನಾಡಿನ ಬೃಹದೀಶ್ವರ ದೇವಾಲಯ ಕಟ್ಟಿಸಿದ ರಾಜ ರಾಜಚೋಳನ ಕಾಲದಿಂದಲೂ (ಕ್ರಿ.ಶ. ೧೦೧೦) ತಗಾದೆ ಇತ್ತೆಂದು ಇತಿಹಾಸಕಾರರು ದಾಖಲೆ ನೀಡುತ್ತಾರೆ. ಈ ದೇವಾಲಯವೂ ಕೂಡ ಕಾವೇರಿ ನದಿಯ ದಡದ ಮೇಲೆ ನಿರ್ಮಿತವಾಗಿದೆ.

ಲೋಕ ಪಾವನೆ ಕಾವೇರಿ ನದಿ ತಲಕಾವೇರಿಯಲ್ಲಿ ಉದ್ಭವಿಸಿ, ಮುಂದೆ ಹರಿಯುತ್ತಾ ಅನೇಕ ಉಪನದಿಗಳನ್ನು ತನ್ನೊಡಲಿಗೆ ಸೇರಿಸಿಕೊಂಡು ವಿಸ್ತರಿಸಿ ಹರಿದು ಕನ್ನಂಬಾಡಿಯಲ್ಲಿ ಕಟ್ಟಿದ ಅಣೆಕಟ್ಟೆಯಲ್ಲಿ ಧುಮುಕಿ, ಮುಂದೆ ಹಲವು ಜಲಪಾತಗಳಲ್ಲಿ ತನ್ನ ವೈಭವವನ್ನು ಮೆರೆಯುತ್ತಾ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಶೇಖರಣೆಯಾಗುತ್ತದೆ. ತಮಿಳುನಾಡಿನ ಅಪಾರ ಕೃಷಿ ಭೂಮಿಗೆ ನೀರುಣಿಸಿ, ಮುಂದೆ ಸಾಗುತ್ತಾ ಅಲ್ಲಿನ ಪೂರ್ವ ಕರಾವಳಿಯ ಪೂಂಪುಹಾರ್ ಎಂಬಲ್ಲಿ ಬಂಗಾಳಕೊಲ್ಲಿಯೊಡನೆ ಐಕ್ಯವಾಗುವಷ್ಟರಲ್ಲಿ ಎಂಟುನೂರ ನಾಲ್ಕು ಕಿಲೋಮೀಟರ್ ದೂರ ಕ್ರಮಿಸುತ್ತಾಳೆ.

ಕಾವೇರಿ ನದಿ ನೀರಿನ ಕೃಷಿ ಬಳಕೆಯ ದೃಷ್ಟಿಯಿಂದ ಹೇಳುವುದಾದರೆ, ಕೊಡಗಿನ ಜನತೆಗೆ ಅದರ ಉಪಯೋಗ ಅತೀ ಕನಿಷ್ಟ! ಗಡಿ ಪಟ್ಟಣವಾದ ಕುಶಾಲನಗರ ಮತ್ತು ಅದರ ಆಸುಪಾಸಿನ ಜನತೆಯ ಕುಡಿಯುವ ನೀರಿಗೆ ಮಾತ್ರ ಉಪಯೋಗವಾಗುತ್ತಿದೆ. ಮುಂದೆ ಮೈಸೂರು, ಮಂಡ್ಯ, ಕನಕಪುರ ಜಿಲ್ಲೆಗಳ ಲಕ್ಷಾಂತರ ಜನರಿಗೆ ಕುಡಿಯುವ ನೀರು ಮತ್ತು ಲಕ್ಷಾಂತರ ಅನ್ನದಾತ ರೈತರ ಜಮೀನಿಗೆ ನೀರುಣಿಸಿ ಹೆಸರಿಗೆ ತಕ್ಕಂತೆ ‘ಜೀವನದಿ’ ಎಂಬ ಹೆಸರನ್ನು ಸಾರ್ಥಕಪಡಿಸಿಕೊಂಡು ತಮಿಳುನಾಡನ್ನು ಪ್ರವೇಶಿಸುತ್ತಾಳೆ. ಅಲ್ಲಿ ಕರ್ನಾಟಕಕ್ಕಿಂತ ಹೆಚ್ಚು ರೈತರ ಜಮೀನಿಗೆ ನೀರೊದಗಿಸಿ, ಅಲ್ಲಿಯ ನೆಲದಲ್ಲಿ ಹಸಿರುಕ್ಕಿಸಿ, ರೈತರ ಮುಖದಲ್ಲಿ ಸದಾ ಕಾಲ ನಗುವನ್ನು ಒಡಮೂಡಿಸುವಲ್ಲಿ ಯಶಸ್ವಿಯಾಗುತ್ತಾಳೆ. ಏಕೆಂದರೆ ತಮಿಳುನಾಡಿನ ರೈತರು ಕಾವೇರಿಯನ್ನು ನಂಬಿ, ಮುಂಗಾರಿನ ಬೆಳೆ ಫಸಲು ಪಡೆದ ನಂತರ, ಹಿಂಗಾರಿನ ಹಂಗಾಮಿನಲ್ಲಿ ‘ಕುರುವೈ’ ಎಂಬ ಬೇಸಿಗೆ ಭತ್ತದ ಎರಡನೇ ಫಸಲಿಗೆ ಕಾವೇರಿ ನೀರು ಅನಿವಾರ್ಯವೆಂದು ಬಿಂಬಿಸಲಾಗಿದೆ. ವಾಸ್ತವವೆಂದರೆ, ತಮಿಳುನಾಡಿನ ಹಿಂಗಾರು ಮಳೆ ಹಂಗಾಮಿನಲ್ಲಿ ಸಾಕಷ್ಟು ‘ಸೈಕ್ಲೋನು’ಗಳೆಂಬ ಮಳೆ ಮಾರುತಗಳು ಸಾಕಷ್ಟು ಸುರಿಯುತ್ತವೆ.

ಕೊಡಗು ಜಿಲ್ಲೆ ಸೇರಿದಂತೆ ಕರ್ನಾಟಕದ ‘ಕಾವೇರಿ ಕಣಿವೆ’ ಪ್ರದೇಶದಲ್ಲಿ ವಾರ್ಷಿಕ ಸರಾಸರಿ ೭೩೮ ರಿಂದ ೭೫೦ ಟಿ.ಯಂ.ಸಿ.ಯಷ್ಟು (ಒಂದು ಸಾವಿರ ಮಿಲಿಯನ್ ಕ್ಯುಬಿಕ್ ಫೀಟ್) ಮಳೆ ವಾರ್ಷಿಕವಾಗಿ ಸುರಿಯುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇದು ಸಾಮಾನ್ಯ ಮಳೆಗಾಲದ ಲೆಕ್ಕಾಚಾರವಾಗಿದೆ. ಹಾಗೆ ನೋಡಿದರೆ ಹಿಂದಿನ ಐದು ವರ್ಷಗಳು ಅತಿವೃಷ್ಟಿಯ ಕಾರಣದಿಂದ ಅಪಾರವಾದ ಹೆಚ್ಚುವರಿ ನೀರು ಕಾವೇರಿ ನದಿಯಲ್ಲಿ ಹರಿದು, ತಮಿಳುನಾಡು ಮೂಲಕ ಬಂಗಾಳಕೊಲ್ಲಿಯನ್ನು ‘ವ್ಯರ್ಥವಾಗಿ’ ಸೇರಿದೆ. ಇಲ್ಲಿ ವ್ಯರ್ಥವೆಂಬ ಪದಬಳಕೆ ಮಾನವನ ಕೃಷಿ ಮತ್ತು ಆರ್ಥಿಕ ದೃಷ್ಟಿಯಿಂದ ಮಾತ್ರ. ಅಲ್ಲದಿದ್ದರೆ, ಹರಿಯುವ ನದಿ ನೀರು ಸಮುದ್ರವನ್ನು ಸೇರುವುದು ಪ್ರಕೃತಿಯ ಸಹಜ ಧರ್ಮ!

ಈ ವರ್ಷ ೨೦೨೩ ರಲ್ಲಿ, ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಶೇ. ೫೦ಕ್ಕಿಂತ ಜಾಸ್ತಿಯಾದ ಕಾರಣ ಇಲ್ಲಿ ಒಂದುನೂರು ಎಪ್ಪತೈದು ತಾಲೂಕುಗಳನ್ನು ‘ಬರಗಾಲ ಪೀಡಿತ’ವೆಂದು ಸರಕಾರ ಘೋಷಿಸಿದೆ. ಬರಗಾಲವೆಂಬುದು ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಕಂಡು ಕೇಳರಿಯದ ವಿಷಯ. ಈ ವರ್ಷ ಕೊಡಗಿನ ಸೋಮವಾರಪೇಟೆ, ಮಡಿಕೇರಿ, ವೀರಾಜಪೇಟೆ ಈ ಮೂರು ತಾಲೂಕುಗಳು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಇದು ಕೊಡಗಿನ ಮುಂಗಾರು ಪರಿಸ್ಥಿತಿಯ ಕರಾಳ ಚರಿತ್ರೆಗೆ ಮುನ್ನುಡಿಯಂತಿದೆ. ಜೂನ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಬೇಕಿದ್ದ ಮುಂಗಾರು ಮಳೆ ಈ ವರ್ಷ ಸಂಪೂರ್ಣ ಕಾಣೆಯಾಗಿ, ಜುಲೈ ಮೊದಲ ವಾರದಲ್ಲಿ ಮುಖದರ್ಶನ ನೀಡಿ, ನಾಲ್ಕಾರು ದಿನ ಆರ್ಭಟಿಸಿ ಭರವಸೆ ಹುಟ್ಟಿಸಿದರೂ, ನಂತರ ಇಳಿಮುಖವಾಯ್ತು. ಆಗಸ್ಟ್ ತಿಂಗಳಲ್ಲಿ ಆಕಾಶ ತೂತಾದಂತೆ ಸುರಿಯಬೇಕಿದ್ದ ಪುಷ್ಯ, ಆಶ್ಲೇಷ, ಮಖಾ ಮಳೆ ನಕ್ಷತ್ರಗಳು ನಿರಾಶೆಯ ಕಾರ್ಮೋಡ ಹೊತ್ತು ಹಾರಿ ಹೋದವು. ಸೆಪ್ಟೆಂಬರ್ ತಿಂಗಳಿನಲ್ಲಿ ಫಲ್ಗುಣ ಮತ್ತು ಹಸ್ತ ಮಳೆ ನಕ್ಷತ್ರಗಳು ಒಂದಷ್ಟು ಮಳೆ ಸುರಿಸಿದರೂ, ಮುಂಗಾರು ಹಂಗಾಮಿನ ಈ ಪ್ರಥಮ ಅವಧಿಯಲ್ಲಿ ಎಂದಿನ ಜಲಪ್ರಳಯ ಉಂಟು ಮಾಡದೆ. ತನ್ನ ನಾಲ್ಕು ತಿಂಗಳ ಮಳೆಗಾಲದ ಪ್ರಥಮ ಕಂತನ್ನು ಮುಗಿಸಿದೆ. ಇನ್ನು ಅಕ್ಟೋಬರ್ ತಿಂಗಳಿನ ಮೊದಲ ವಾರದಿಂದ ಹಿಂಗಾರು ಮಾರುತಗಳು ಬಂಗಾಳಕೊಲ್ಲಿಯ ಕಡೆಯಿಂದ ಉದ್ಭವಿಸಿ, ತಮಿಳುನಾಡು ರಾಜ್ಯವನ್ನು ತೋಯಿಸಿ, ಮುಳುಗಿಸಿ ಕರ್ನಾಟಕಕ್ಕೆ ಸೈಕ್ಲೋನ್ ರೂಪದಲ್ಲಿ ಗಾಳಿ ಮತ್ತು ಮೋಡವನ್ನು ಉಂಟು ಮಾಡಿ ಹಾರಿಹೋಗುತ್ತವೆಯೇ ಹೊರತು ಅದನ್ನು ನೀರಾವರಿಗಾಗಿ ನೆಚ್ಚಿಕೊಳ್ಳುವ ಪರಿಸ್ಥಿತಿ ಇಲ್ಲ. ಈ ಕಾರಣಗಳಿಂದ ಕರ್ನಾಟಕ ಕನ್ನಂಬಾಡಿ ಅಣೆಕಟ್ಟು ಅದರ ಸಾಮರ್ಥ್ಯವಾದ ೧೨೪ ಅಡಿಗಳಿಗೆ ಬದಲಾಗಿ ಕೇವಲ ೧೧೩ ಅಡಿಗಳಷ್ಟು ಮಾತ್ರ ತುಂಬಿತ್ತು. ಅಷ್ಟರಲ್ಲಿ ತಮಿಳುನಾಡು ತನ್ನ ನೀರಿಗಾಗಿ ಖ್ಯಾತೆ ತೆಗೆದುದರಿಂದ, ಅಲ್ಲಿಗೆ ದಿನಕ್ಕೆ ಐದು ಸಾವಿರ ಕ್ಯುಸೆಕ್ ಪ್ರಥಮ ಕಂತಿನಲ್ಲಿ ದಿನಾಲು ಹರಿಸುವ ಪ್ರಮೇಯ ಒದಗಿ ಬಂದ ಕಾರಣ, ಈಗ ನೀರಿನ ಸಂಗ್ರಹ ೮೫ ರಿಂದ ೯೦ ಅಡಿಗಳಷ್ಟು ಬಾಕಿ ಉಳಿದಿದೆ.

ಸದ್ಯದ ಪರಿಸ್ಥಿತಿ ಹೀಗಿದ್ದರೂ, ಕಾವೇರಿ ನೀರು ಹಂಚಿಕೆ ಒಪ್ಪಂದ ಪ್ರಕಾರ ಕರ್ನಾಟಕವು ತಮಿಳುನಾಡಿಗೆ ಪ್ರತಿವರ್ಷ ಮಳೆ ಬರಲಿ, ಬಾರದಿರಲಿ, ೪೧೯ ಟಿ.ಯಂ.ಸಿ. ನೀರು ಹರಿಸಬೇಕು. ಅದರೊಡನೆ ಕೇರಳ ಮತ್ತು ಪಾಂಡಿಚೇರಿಯ ಪಾಲು ನೀರು ತಲಾ ೩೦ ಮತ್ತು ೭ ಟಿ.ಯಂ.ಸಿ. ಹೀಗೆ ಕಾವೇರಿ ನದಿ ಕರ್ನಾಟಕದಿಂದ ತಮಿಳುನಾಡಿಗೆ ಒಟ್ಟು ೪೫೬ ಟಿ.ಯಂ.ಸಿ. ಬಿಡಬೇಕು. ಪ್ರಸ್ತುತ, ಅಕ್ಟೋಬರ್ ೧೮ ರ ತನಕ ದಿನವೊಂದಕ್ಕೆ ಮೂರು ಸಾವಿರ ಕ್ಯುಸೆಕ್ ನೀರು ಬಿಡಬೇಕೆಂದು ಮರು ತೀರ್ಪು ನೀಡಲಾಗಿದೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಕನ್ನಂಬಾಡಿ ಸೇರಿದಂತೆ ಉಳಿದ ಮೂರು ಅಣೆಕಟ್ಟುಗಳ ಒಟ್ಟು ನೀರು ಸಂಗ್ರಹ ಸಾಮರ್ಥ್ಯ ಕೇವಲ ೧೧೨ ಟಿ.ಯಂ.ಸಿ.ಗಳಾದರೆ, ತಮಿಳುನಾಡಿನ ಮೆಟ್ಟೂರು ಜಲಾಶಯ (೯೩.೫ ಟಿ.ಯಂ.ಸಿ.) ಮತ್ತು ಭವಾನಿ ಸಾಗರ ಜಲಾಶಯ (೩೩ ಟಿ.ಯಂ.ಸಿ.). ಎರಡರ ಸಾಮರ್ಥ್ಯ (೧೪೫ ಟಿ.ಯಂ.ಸಿ.) ಆಗಿದ್ದು, ಇನ್ನೂ ಎರಡು ಪ್ರಮುಖ ಜಲಾಶಯಗಳೂ ಇವೆ.

ನಾನು ಇದೇ ಸೆಪ್ಟೆಂಬರ್ ೨೩ ರ ಕೊನೆಯ ವಾರದಲ್ಲಿ ತಮಿಳುನಾಡಿನಾದ್ಯಂತ, ಪೂರ್ವ ಕರಾವಳಿ, ಪಶ್ಚಿಮ ಕರಾವಳಿ ಹಾಗೂ ಅದರ ಒಳನಾಡಿನಲ್ಲಿ ಪ್ರವಾಸ ಹೋದಾಗ ಗಮನಿಸಿದ್ದನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಕಾವೇರಿ ನದಿ ಮುಖಜ ಭೂಮಿಯ ಹರಿವಿನ ಒಳನಾಡಿನ ಕೃಷಿ ಭೂಮಿಯಲ್ಲಿ ನೀರಿಗೆ ಬರವಿಲ್ಲದೆ ಸಮೃದ್ಧಿಯಿಂದ ಹಸಿರುಕ್ಕುತಿತ್ತು. ಅದಕ್ಕೆ ಪೂರಕವಾಗಿ ನೀಲಗಿರಿ ಮತ್ತು ಕೊಡಕ್ಕನಾಲ್ ಬೆಟ್ಟ ಸಾಲುಗಳಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ನದಿಗಳೂ ಕೊಡುಗೆ ನೀಡಿವೆ. ನಾನು ನೋಡಿದಂತೆ, ಕಾವೇರಿ ನದಿಯ ಸೇತುವೆ ಮೂಲಕ ಅಡ್ಡಹಾಯುವಾಗ ಕರ್ನಾಟಕದಿಂದ ಹರಿದು ಹೋದ ಪ್ರಥಮ ಕಂತಿನ ಐದು ಸಾವಿರ ಕ್ಯುಸೆಕ್ ನೀರು ಸರಾಗವಾಗಿ ಹಾಗೆಯೇ ಸಮುದ್ರದತ್ತ ಹರಿದು ಹೋದಂತೆ ಕಾಣಿಸುತ್ತಿತ್ತು. ಇದಕ್ಕೆ ಕಾರಣ, ಭತ್ತದ ಬೆಳೆಯ ಹಂತದಲ್ಲಿ ಗದ್ದೆಗಳಲ್ಲಿ ಎರಡು-ಮೂರು ಇಂಚು ನಿಂತಿರಬೇಕಷ್ಟೆ. ಇದು ರೈತನ ಅನುಭವ. ಹೆಚ್ಚುವರಿ ನೀರು ಕೆಳಭಾಗದ ಕೃಷಿ ಗದ್ದೆಗಳಿಗೆ ಹರಿಯುತ್ತಾ ಪುನಃ ಕಾಲುವೆಗಳ ಮೂಲಕ ಕೆಳಗಿನ ನದಿಗೆ ಸೇರಿ ಸಮುದ್ರದಲ್ಲಿ ಐಕ್ಯವಾಗುತ್ತದೆ. ಇರಲಿ, ಪ್ರಸ್ತುತ ಆದೇಶದಂತೆ ದಿನವೊಂದಕ್ಕೆ ಮೂರು ಸಾವಿರ ಕ್ಯುಸೆಕ್ ನೀರನ್ನು ಕನ್ನಂಬಾಡಿಯಿAದ, ಅಕ್ಟೋಬರ್ ೧೫ ರತನಕ ಬಿಡಲೇಬೇಕಾಗಿರುವುದರಿಂದ ಇನ್ನೂ ಐದಾರು ಟಿ.ಯಂ.ಸಿ. ನೀರು ಖಾಲಿಯಾಗುತ್ತದೆ. ಕನ್ನಂಬಾಡಿಯ ಡೆಡ್‌ಸ್ಟೋರೇಜ್ ಎತ್ತರ ಅರವತ್ತು ಅಡಿಗಳು ತಲಪಿದಾಗ, ಅದೊಂದು ದೊಡ್ಡ ಕೆರೆಯಂತಾಗುತ್ತದೆ. ಈ ವರ್ಷ ಹಿಂಗಾರು ಮಳೆಯೂ ಕೈಕೊಟ್ಟರೆ, ಉಳಿದ ೨೦-೨೫ ಟಿ.ಯಂ.ಸಿ. ನೀರಿನಲ್ಲಿ ಕರ್ನಾಟಕ ರೈತರ ಜಮೀನಿಗೆ ಹರಿಸಲು, ಮೈಸೂರು, ಬೆಂಗಳೂರು, ಮಂಡ್ಯ, ರಾಮನಗರ ಮೊದಲಾದ ಪ್ರಮುಖ ನಗರಗಳಿಗೆ ಕುಡಿಯುವ ನೀರಿಗೂ ತತ್ವಾರ ಕಟ್ಟಿಟ್ಟ ಬುತ್ತಿ. ಹಿಂಗಾರು ಕಳೆದ ನಂತರ ಮುಂದಿನ ಆರು ತಿಂಗಳು ಬಿರುಬಿಸಿಲಿಗೆ ಆವಿಯಾಗುವ ಕನ್ನಂಬಾಡಿಯ ಜಲಾಶಯದ ನೀರಿನ ಪ್ರಮಾಣ ಗಣನೀಯ!

ಹಾಗಿದ್ದರೆ, ಹಲವು ವರ್ಷಗಳ ಕುಖ್ಯಾತಿಯ ಇತಿಹಾಸವಿರುವ ಕರ್ನಾಟಕ ಮತ್ತು ತಮಿಳುನಾಡು ನಡುವಿನ ‘ಘರ್ಷಣೆಯ ಆರದ ಬೆಂಕಿ’ ಕಾವೇರಿ ನದಿ ನೀರಿನ ಹಂಚಿಕೆಗೆ ಸರಳ ಮಾರ್ಗವಿಲ್ಲವೆ? ಖಂಡಿತಾ ಇದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ಈಗ ಇರುವ ಕಾವೇರಿ ನೀರು ನಿಯಂತ್ರಣ ಸಮಿತಿ ಮುಂತಾದವುಗಳು ಪಾಲಿಸುವ ಓಬಿರಾಯನ ಕಾಲದ ಹತ್ತು-ಹದಿನೈದು ವರ್ಷಗಳಿಗೆ ಅನ್ವಯಿಸುವ ಕಾನೂನುಗಳನ್ನು-ಒಪ್ಪಂದಗಳನ್ನು ಮೊದಲು ರದ್ದುಪಡಿಸಬೇಕು. ಈವಾಗ ಹವಾಮಾನ, ಮಳೆ ವರದಿಯನ್ನು ದಿನನಿತ್ಯ ಪಡೆಯಲು ಸಾಧ್ಯ. ಹೀಗಿರುವಾಗ ಪ್ರತೀ ಹದಿನೈದು ದಿನಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಮಳೆಗಾಲದ ಅವಧಿಯಲ್ಲಿ ಸಭೆ ಸೇರಿ ಪ್ರತಿ ತಿಂಗಳು ಬಿದ್ದ ಮಳೆಯ ಪ್ರಮಾಣದ ಮೇಲೆ ತಿಂಗಳ ನೀರಿನ ಹಂಚಿಕೆ ನಿರ್ಧರಿಸಬಹುದು. ಎರಡೂ ರಾಜ್ಯದ ನೀರಾವರಿ ತಜ್ಞರ, ರೈತರ ಅನುಭವಿ ಮಾತಿಗೂ ಕಿವಿಗೊಡುವುದರಿಂದ, ಪ್ರತಿ ವರ್ಷ ಎರಡೂ ಕಡೆ ಉಂಟಾಗುವ ಬಂದ್‌ಗಳು, ಅದರಿಂದ ಸರಕಾರಕ್ಕೆ ಉಂಟಾಗುವ ನಷ್ಟವೂ ಇಲ್ಲವಾಗುತ್ತದೆ. ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರಿನ ಉದ್ದೇಶದ ‘ಮೇಕೆದಾಟು ಅಣೆಕಟ್ಟು’ ಯೋಜನೆ ಉತ್ತಮ ಸಲಹೆ. - ವಿಶ್ವನಾಥ್ ಎಡಿಕೇರಿ, ಬೆಂಗಳೂರು.