ಸೋಮವಾರಪೇಟೆ, ಅ. ೧೧: ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅಧಿಕಾರದ ದರ್ಪ ತೋರಿಸಬಾರದು ಎಂದು ಲೋಕಾಯುಕ್ತ ಡಿವೈಎಸ್ಪಿ ಪವನ್ಕುಮಾರ್ ನಿರ್ದೇಶನ ನೀಡಿದರು.
ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕರಿಂದ ದೂರು ಸ್ವೀಕಾರ ಮತ್ತು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರನ್ನು ಮೊದಲು ಕುಳಿತುಕೊಳ್ಳುವಂತೆ ತಿಳಿಸಿ, ನಂತರ ಅವರ ಅಹವಾಲುಗಳನ್ನು ಸೌಜನ್ಯದಿಂದ ಆಲಿಸಬೇಕು ಎಂದರು.
ಸಮಸ್ಯೆಗಳು ಸಣ್ಣದಾಗಿದ್ದಾಗಲೇ ಅವುಗಳನ್ನು ಪರಿಹರಿಸಬೇಕು. ವಿಳಂಬವಾದರೆ ಮತ್ತಷ್ಟು ಕ್ಲಿಷ್ಟಕರವಾಗುತ್ತದೆ. ಕಚೇರಿ ಕೆಲಸ ಕಾರ್ಯಗಳಿಗೆ ವೃಥಾ ಅಲೆದಾಡಿಸಬಾರದು. ಯಾವುದೇ ಕಾರಣಕ್ಕೂ ಲಂಚಕ್ಕೆ ಬೇಡಿಕೆ ಇಡಬಾರದು ಎಂದು ನಿರ್ದೇಶನ ನೀಡಿದರು.
ಸರ್ಕಾರಿ ಅಧಿಕಾರಿ-ಸಿಬ್ಬಂದಿಗಳು ಕೆಲಸದ ಸಮಯದಲ್ಲಿ ತಮ್ಮ ಗುರುತಿನ ಚೀಟಿಯನ್ನು ಧರಿಸಿರಬೇಕು. ತಮ್ಮ ಹೆಸರು, ಹುದ್ದೆ ಮತ್ತು ಸಂಪರ್ಕ ಸಂಖ್ಯೆಯ ಫಲಕವನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಇಡಬೇಕು ಎಂದು ಡಿವೈಎಸ್ಪಿ ಪವನ್ಕುಮಾರ್ ಸೂಚಿಸಿದರು.
ಸಭೆಯಲ್ಲಿ ಒಟ್ಟು ೧೦ ದೂರುಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ೩ ದೂರುಗಳಿಗೆ ಸಂಬAಧಿಸಿದAತೆ ಸ್ಥಳದಲ್ಲೇ ಪರಿಹಾರ ಒದಗಿಸಿದರು. ಉಳಿದ ೭ ದೂರುಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುವ ಭರವಸೆ ನೀಡಿದರು.
ಸಭೆಯಲ್ಲಿ ತಾಲೂಕು ತಹಶೀಲ್ದಾರ್ ಎನ್.ಎಸ್. ನರಗುಂದ್, ವೈದ್ಯಾಧಿಕಾರಿ ಡಾ. ಶಿವಪ್ರಸಾದ್, ತಾಲೂಕು ಪಂಚಾಯಿತಿಯ ರವೀಂದ್ರ, ಕೃಷಿ, ತೋಟಗಾರಿಕೆ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದಾದ ನಂತರ ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಇಲಾಖೆ ವತಿಯಿಂದ ಸೂಚನೆಗಳನ್ನು ನೀಡಿದರು.