ಮಡಿಕೇರಿ, ಅ. ೧೧ : ಮಡಿಕೇರಿ ದಸರಾ ಕಚೇರಿಯನ್ನು ಉಪಸಮಿತಿ ಗಳಿಗೆ ನೀಡದಿರುವ ತೀರ್ಮಾನವನ್ನು ಹಿಂಪಡೆದಿರುವ ದಸರಾ ಸಮಿತಿ ಸಭೆ ಗಳನ್ನು ದಸರಾ ಸಮಿತಿ ಕಚೇರಿಯಲ್ಲಿಯೇ ನಡೆಸಲು ಅನುಮತಿ ನೀಡಿದೆ.

ದಸರಾ ಸಮಿತಿ ಕಚೇರಿಯಲ್ಲಿ ಸಭೆಗಳನ್ನು ಉಪಸಮಿತಿಗಳು ನಡೆಸಬಾರದೆಂಬ ದಸರಾ ಸಮಿತಿ ಸೂಚನೆಗೆ ಅಸಮಾಧಾನಗೊಂಡ ವಿವಿಧ ಉಪಸಮಿತಿಗಳ ಅಧ್ಯಕ್ಷರು, ಸದಸ್ಯರು, ದಸರಾ ಸಮಿತಿ ಕಚೇರಿಯಿಂದಲೇ ತಮ್ಮನ್ನು ಹೊರಹಾಕುವ ತೀರ್ಮಾನ ನೋವು ತಂದಿದ್ದು ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವುದಾಗಿ ನಗರ ದಸರಾ ಸಮಿತಿ ಅಧ್ಯಕ್ಷರಿಗೆ ಹೇಳಿದ್ದರು.

ಈ ಸಂದರ್ಭ ಹಾಜರಿದ್ದ ನಗರಸಭೆಯ ಉಪಾಧ್ಯಕ್ಷೆ ಸವಿತಾ ರಾಕೇಶ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಜೇಶ್, ಖಜಾಂಜಿ ಅರುಣ್ ಶೆಟ್ಟಿ, ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷ ಬಿ.ಎಂ. ರಾಜೇಶ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಸದಸ್ಯರಾದ ಮಹೇಶ್ ಜೈನಿ, ಕೆ.ಎಸ್. ರಮೇಶ್ ಉಪಸಮಿತಿಗಳಿಗೆ ಕಚೇರಿ ನೀಡುವ ಬಗ್ಗೆ ಮಾತುಕತೆ ನಡೆಸಿದರು. ದಸರಾಕ್ಕೆ ಇನ್ನು ಕೇವಲ ಕೈಬೆರಳೆಣಿಕೆಯಷ್ಟು ದಿನಗಳೇ ಬಾಕಿ ಉಳಿದಿರುವುದರಿಂದಾಗಿ ಯಾವುದೇ ಗೊಂದಲ ಬೇಡ ಎಂದು ದಸರಾ ಸಮಿತಿ ಮತ್ತು ಉಪಸಮಿತಿಗಳಿಗೆ ಪ್ರಮುಖರು ಸೂಚಿಸಿದರು.

ಇದೇ ಸಂದರ್ಭ ಮಾತನಾಡಿದ ನಗರಸಭಾಧ್ಯಕ್ಷೆ ಮತ್ತು ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ದಸರಾ ಉಪಸಮಿತಿಗಳಾದ ಕ್ರೀಡಾ, ಯುವ ಮತ್ತು ಮಹಿಳಾ ದಸರಾ ಸಮಿತಿಗಳು ಸಾರ್ವಜನಿಕರಿಂದ ಚಂದಾ ಸಂಗ್ರಹ ಮಾಡುವುದೇ ಆದಲ್ಲಿ ದಸರಾ ಸಮಿತಿಯಿಂದ ನೀಡಲಾಗುವ ಅಧಿಕೃತ ರಶೀದಿಯಲ್ಲಿಯೇ ಸಂಗ್ರಹಿಸುವAತೆ ಸೂಚಿಸಿದರು.

ತಾ. ೨೨ ರಂದು ಆಯೋಜಿತವಾದ ಮಹಿಳಾ ದಸರಾ ಸಮಿತಿಗೆ ರಾಜೀನಾಮೆ ಪತ್ರವನ್ನು ಇದೇ ಸಂದರ್ಭ ಸಂಚಾಲಕಿಯಾಗಿದ್ದ ನಗರಸಭಾ ಸದಸ್ಯೆ ಶ್ವೇತಾ ಪ್ರಶಾಂತ್ ಸಲ್ಲಿಸಿದರು.