ಮಡಿಕೇರಿ, ಅ. ೧೧: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭವತಿಯನ್ನಾಗಿ ಮಾಡಿದ ಆರೋಪಿಯೋರ್ವನಿಗೆ ನ್ಯಾಯಾಲಯ ೨೦ ವರ್ಷಗಳ ಸಜೆ ವಿಧಿಸಿ ತೀರ್ಪು ನೀಡಿದೆ.
ದಿನಾಂಕ ೩೦.೧೦.೨೦೨೦.ರಂದು ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆಯಿಂದ ಆರೋಪಿ ಬಿ.ಎಂ. ರಂಜನ್ ಪೂಜಾರಿ ಎಂಬಾತ ಆಟೋ ರಿಕ್ಷಾದಲ್ಲಿ ಮನೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಲು ಕಾರಣನಾದ ಹಿನ್ನೆಲೆಯಲ್ಲಿ ಕೊಡಗು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪಿ.ಪಿ. ಸೋಮೇಗೌಡ ಮತ್ತು ಎಸ್.ಎಸ್. ರವಿಕಿರಣ್ ಇವರುಗಳು ಆರೋಪಿಯನ್ನು ಬಂಧಿಸಿ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಸಿ. ಶಾಮ್ ಪ್ರಸಾದ್ ಅವರು ಆರೋಪಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಕಲಂ ೪(೨) ಪೋಕ್ಸೋ ಕಾಯ್ದೆ ಅಡಿ ೨೦ ವರ್ಷ ಸಜೆ ಮತ್ತು ರೂ. ೫೦೦೦ ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ.ಎಸ್. ರುದ್ರ ಪ್ರಸನ್ನ ಅವರು ವಾದ ಮಂಡಿಸಿದರು.