ಮಡಿಕೇರಿ, ಅ. ೧೦: ಕೊಡಗು ಗೌಡ ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರ, ಮರಗೋಡು ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ, ಮರಗೋಡು ಫಾಮರ‍್ಸ್ ಡೆವಲಪ್‌ಮೆಂಟ್ ಮತ್ತು ರಿಕ್ರಿಯೇಶನ್ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ಕಾಫಿ ಮತ್ತು ಕಾಳುಮೆಣಸು ಬೆಳೆಗಳ ಬೇಸಾಯದ ಕುರಿತು ಕೃಷಿಕರಿಗಾಗಿ ವಿಚಾರ ಸಂಕಿರಣ ನಡೆಯಿತು.

ಮರಗೋಡುವಿನ ಪ್ರಾಥಮಿಕ ಕೃಷಿ ಸಹಕಾರ ಸಂಘದ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಡಾ. ಪ್ರಭಾಕರ್ ಹಾಗೂ ಡಾ. ವೀರೇಂದ್ರ ಕುಮಾರ್ ಅವರುಗಳು ಕಾಳುಮೆಣಸು ಬೇಸಾಯದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ವಿಷಯ ತಜ್ಞ ಡಾ. ನಾಗರಾಜ್ ಹಾಗೂ ಡಾ. ಮಂಜುನಾಥ ರೆಡ್ಡಿ ಅವರುಗಳು ಮಾತನಾಡಿ, ಕಾಫಿ ಬೆಳೆಸುವ ಆಧುನಿಕ ಕ್ರಮ ಮತ್ತು ಗಿಡಗಳಿಗೆ ತಗಲುವ ರೋಗ ಮತ್ತು ಕೀಟ ಬಾಧೆಗಳನ್ನು ಹತ್ತಿಕ್ಕುವ ಕ್ರಮಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಮರಗೋಡು ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕಾಂಗೀರ ಸತೀಶ್, ಮರಗೋಡು ಫಾಮರ‍್ಸ್ ಡೆವಲಪ್ ಮೆಂಟ್ ಮತ್ತು ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ಕಟ್ಟೆಮನೆ ಪೂಣಚ್ಚ, ಪ್ರಮುಖರಾದ ಪುಲಿಯಂಡ ನಂಜಪ್ಪ, ಕಟ್ಟೆಮನೆ ಪ್ರೇಮ, ಕೊಡಗು ಗೌಡ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಸಹ ಕಾರ್ಯದರ್ಶಿ ಅತ್ತೇಡಿ ಕೃಷ್ಣಪ್ಪ, ನಿರ್ದೇಶಕರುಗಳಾದ ಬೈತಡ್ಕ ಬೆಳ್ಯಪ್ಪ, ದಂಬೆಕೋಡಿ ಆನಂದ, ಹೊಸೋಕ್ಲು ಟಿ. ಪೊನ್ನಪ್ಪ, ಹೊದ್ದೆಟ್ಟಿರ ರಾಮಯ್ಯ, ಕುಲ್ಲಚೆಟ್ಟಿ ಎಂ. ಪೂವಯ್ಯ, ಸೂದನ ಮೋಹಿನಿ ಮತ್ತಿತರರು ಉಪಸ್ಥಿತರಿದ್ದರು.

ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ ಮಾತನಾಡಿದರು. ಸಂಘದ ಖಜಾಂಚಿ ಕರ್ಣಯ್ಯನ ನಾಗೇಶ್ ನಿರೂಪಿಸಿ, ಕಾರ್ಯದರ್ಶಿ ಬಾರಿಕೆ ಅಯ್ಯಪ್ಪ ವಂದಿಸಿದರು. ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಸಂಖ್ಯೆಯ ಬೆಳೆಗಾರರು ಕೃಷಿಗೆ ಪೂರಕವಾಗಿ ಕೇಳಿದ ಪ್ರಶ್ನೆಗಳಿಗೆ ವಿಷಯ ತಜ್ಞರು ಉತ್ತರವನ್ನು ನೀಡಿದರು.