ಶನಿವಾರಸಂತೆ, ಅ. ೧೧: ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಶಾಸಕ ಡಾ. ಮಂಥರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಆಲೂರು-ಸಿದ್ದಾಪುರ, ಕೊಡ್ಲಿಪೇಟೆ, ಗೌಡಳ್ಳಿ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ಸಮಸ್ಯೆಗಳು ಹಾಗೂ ಕುಂದು-ಕೊರತೆಗಳ ಬಗ್ಗೆ ಚರ್ಚೆ ನಡೆಯಿತು.

ಶಾಸಕರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸತೀಶ್, ತಾಲೂಕು ಆರೋಗ್ಯ ಅಧಿಕಾರಿ ಶ್ರೀನಿವಾಸ್, ಇ.ಒ. ಜಯಣ್ಣ, ವೈದ್ಯಾಧಿಕಾರಿಗಳಾದ ಡಾ. ಇಂದೂಧರ್, ಡಾ. ಸುಪರ್ಣಾ, ಡಾ. ಪವಿತ್ರಾ, ಡಾ. ಕನ್ನಿಕಾ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಡಾ. ಸುಪರ್ಣಾ ಮಾತನಾಡಿ, ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆಲಸದ ಒತ್ತಡ ಇರುವುದರಿಂದ ೧ ಸ್ಟಾಪ್ ನರ್ಸ್ ಹುದ್ದೆಯ ಅಗತ್ಯವಿದೆ. ತಡೆಗೋಡೆ ನಿರ್ಮಾಣವಾಗಬೇಕು. ರಸ್ತೆ ಮೋರಿಯ ನೀರು ಆಸ್ಪತ್ರೆ ಆವರಣಕ್ಕೆ ಹರಿದು ಬರುತ್ತದೆ ಆಸ್ಪತ್ರೆಯ ಅಭಿವೃದ್ಧಿ ಆಗಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್, ಸ್ಟಾಫ್ ನರ್ಸ್ ಹುದ್ದೆ ಕ್ರಿಯೆಟ್ ಆಗಬೇಕು ಎಂದು ಹೇಳಿದಾಗ, ಸ್ಪಂದಿಸಿದ ಶಾಸಕರು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು, ರೂ. ೫ ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲು, ಚರಂಡಿ ಸ್ವಚ್ಛಗೊಳಿಸಲು ಹಾಗೂ ಆಸ್ಪತ್ರೆ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿ ನಿಧಿಯನ್ನು ಪಡೆದುಕೊಳ್ಳುವಂತೆ ಆದೇಶಿಸಿದರು.

ಡಾ. ಪವಿತ್ರಾ ಮಾತನಾಡಿ, ಕೊಡ್ಲಿಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾವೊಬ್ಬರೇ ವೈದ್ಯರಾಗಿದ್ದು, ೮ ಹುದ್ದೆಗಳು ಖಾಲಿ ಇವೆ. ಎಫ್‌ಡಿಎ ಇಲ್ಲ. ಒಬ್ಬರು ಫಾರ್ಮಸಿಸ್ಟ್ ಹಾಗೂ ಅಂಬುಲೆನ್ಸ್ನ ಅಗತ್ಯವಿದೆ ಎಂದು ಸಮಸ್ಯೆಯನ್ನು ತೆರೆದಿಟ್ಟರು.

ಜಿಲ್ಲಾ ಆರೋಗ್ಯಾಧಿಕಾರಿ ಜತೆ ಸಮಾಲೋಚಿಸಿದ ಶಾಸಕರು, ಸ್ಟಾಫ್ ನರ್ಸ್ ಹಾಗೂ ಎಫ್ ಡಿಎ ಹುದ್ದೆ ಭರ್ತಿಗೆ ಹಾಗೂ ವಸತಿ ನಿರ್ಮಾಣಕ್ಕೆ ಸೂಚಿಸಿ ಸಮಸ್ಯೆ ಬಗೆಹರಿಸುವಂತೆ ಹೇಳಿದರು.

ಗೌಡಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆಗಳ ಬಗ್ಗೆ ಡಾ. ಇಂದೂಧರ್ ಮಾತನಾಡಿ, ಆರೋಗ್ಯ ಕೇಂದ್ರಕ್ಕೆ ತಡೆಗೋಡೆ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ ಬಗ್ಗೆ ಆದೇಶಿಸಿದರು.

ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ೩೦ ಹಾಸಿಗೆಗಳ ಸೌಲಭ್ಯವಿದ್ದು ಇಬ್ಬರು ವೈದ್ಯರಿದ್ದಾರೆ. ಸರ್ಜನ್, ಗೈನಕಾಲಜಿಸ್ಟ್, ರೆಡಿಯಾಲಾಜಿಸ್ಟ್ ಸೇರಿದಂತೆ ಮೂವರು ವೈದ್ಯರು, ಎಕ್ಸರೆ ಟೆಕ್ನಿಷಿಯನ್ ಅಗತ್ಯವಿದೆ. ಆಪರೇಶನ್ ಥಿಯೇಟರ್ ಸಿದ್ಧವಾಗುತ್ತಿದೆ. ಅಲ್ಲಿಗೆ ಹಾಸಿಗೆ, ವಿದ್ಯುತ್ ದೀಪಗಳು ಬೇಕು. ಶೌಚಾಲಯ, ಪೈಪ್‌ಲೈನ್ ದುರಸ್ತಿಗೊಳ್ಳಬೇಕು. ಜನರೇಟರ್, ಸಿಸಿ ಟಿವಿ, ವಾಷಿಂಗ್ ಮಿಷನ್, ನಲ್ಲಿ ನೀರು ಸರಬರಾಜು ಆಗಬೇಕು. ಆರೋಗ್ಯ ಕೇಂದ್ರದ ಮುಂಭಾಗದ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಹಿಂಭಾಗದಲ್ಲಿರುವ ಹಳೇ ಮರಗಳನ್ನು ತೆರವುಗೊಳಿಸಬೇಕು ಎಂದು ಇತ್ಯಾದಿ ಬೇಡಿಕೆಗಳನ್ನು ವೈದ್ಯಾಧಿಕಾರಿ ಡಾ. ಇಂದೂಧರ್ ಸಭೆಯ ಮುಂದಿಟ್ಟರು.

ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ಡಾ. ಮಂಥರ್ ಗೌಡ ಮಾತನಾಡಿ, ತ್ಯಾಜ್ಯ ವಿಲೇವಾರಿ ಘಟಕ ತೆರವುಗೊಳಿಸಲು ಹಾಗೂ ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸೂಚಿಸಿದರು. ತಡೆಗೋಡೆ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ. ೫ ಲಕ್ಷ ಅನುದಾನ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ರೂ. ೫ ಲಕ್ಷ ನೀಡುವಂತೆ ತಿಳಿಸಿದರು. ಪ್ರತಿ ಆರೋಗ್ಯ ಕೇಂದ್ರಗಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ತಾಲೂಕು ಆರೋಗ್ಯ ಇಲಾಖೆ ಖರ್ಚನ್ನು ಭರಿಸಬೇಕು ಎಂದು ಆದೇಶಿಸಿದರು.

ಡಾ. ಕನ್ನಿಕಾ, ಡಾ. ಬಿಪಿನ್, ವೃತ್ತ ನಿರೀಕ್ಷಕ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತಾ ಹರೀಶ್, ಸತ್ಯವತಿ, ಶಾಸಕರ ಆಪ್ತ ಸಹಾಯಕ ಕಿರಣ್, ಇಂಜಿನಿಯರ್ ಸಲೀಂ, ಕಚೇರಿ ಅಧೀಕ್ಷಕ ಗಿರೀಶ್, ಟೆಕ್ನಿಷಿಯನ್ ರಶೀದ್, ಸಿಬ್ಬಂದಿ ನವೀನ್ ಕುಮಾರ್, ಗಿರೀಶ್, ಪ್ರವೀಣ್, ಸತ್ಯನಾರಾಯಣ್, ಮುತ್ತಪ್ಪ ಇತರರು ಹಾಜರಿದ್ದರು.