ಕರಿಕೆ, ಅ. ೧೦: ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಎನ್. ಬಾಲಚಂದ್ರ ನಾಯರ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಶಿಕ್ಷಣ ಅಧಿಕಾರಿಗಳು, ಪೋಷಕರು, ಗ್ರಾಮಸ್ಥರ ಸಭೆ ಏರ್ಪಡಿಸಲಾಗಿತ್ತು. ಸಭೆಗೆ ಪಾಲ್ಗೊಂಡು ಶಿಕ್ಷಕರ ಖಾಲಿ ಹುದ್ದೆ ಬಗ್ಗೆ ಪೋಷಕರಿಗೆ ಮಾಹಿತಿ ಒದಗಿಸಬೇಕಾದ ಶಿಕ್ಷಣ ಅಧಿಕಾರಿ ಸಭೆಗೆ ಗೈರಾದ ಬಗ್ಗೆ ಸಭೆಯಲ್ಲಿ ಪಾಲ್ಗೊಂಡ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬದಲು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ್, ಶಾಲೆಯ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿ, ಈಗಾಗಲೇ ಆರು ಖಾಯಂ ಶಿಕ್ಷಕರಲ್ಲಿ ಮೂರು ಜನ ವರ್ಗಾವಣೆಗೊಂಡಿದ್ದು ಮೂರು ಶಿಕ್ಷಕರು ಉಳಿದಿದ್ದು ಅದರಲ್ಲಿ ಇಬ್ಬರು ಶಿಕ್ಷಕರಿಗೆ ವರ್ಗಾವಣೆಯಾಗಿ ಸದ್ಯ ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಡೆ ಹಿಡಿಯಲಾಗಿದೆ. ಇಂಗ್ಲಿಷ್, ಹಿಂದಿ, ಗಣಿತ, ಸಮಾಜ, ದೈಹಿಕ ಶಿಕ್ಷಣ, ವಿಜ್ಞಾನ, ಪ್ರಥಮ ದರ್ಜೆ ಸಹಾಯಕ ಹುದ್ದೆ ಖಾಲಿ ಇದ್ದು, ಇದು ಸರಕಾರದ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಬೇಕೆಂದರು. ಗಣಿತ ಶಿಕ್ಷಕ ಹುದ್ದೆಗೆ ಹಗರಿಬೊಮ್ಮನ ಹಳ್ಳಿಯಿಂದ ಓರ್ವ ಶಿಕ್ಷಕರ ವರ್ಗಾವಣೆ ನೇಮಕಾತಿ ಆಗಿದ್ದು ಇನ್ನೂ ಶಾಲೆಗೆ ಆಗಮಿಸಿಲ್ಲ ಎಂದರು. ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ನಾಯರ್ ಮಾತನಾಡಿ, ೨೦೧೮ ರಿಂದ ಶಿಕ್ಷಕರ ನೇಮಕಾತಿ ಸರಕಾರದಿಂದ ವಿಳಂಬವಾಗಿದ್ದು, ಕಳೆದ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಖಾಯಂ ಶಿಕ್ಷಕರ ವರ್ಗಾವಣೆ ಆದೇಶವಾಗಿದ್ದರೂ ಮತ್ತೆ ಖಾಯಂ ಶಿಕ್ಷಕರ ನೇಮಕಾತಿ ಆಗುವವರೆಗೆ ಶಾಸಕರ ಮೂಲಕ ಇಲಾಖೆ ಗಮನಕ್ಕೆ ತಂದು ಸದ್ಯಕ್ಕೆ ತಡೆ ಹಿಡಿಯಲಾಗಿದೆ ಎಂದರು. ಈ ಬಗ್ಗೆ ಶಾಸಕರ ಮೂಲಕ ಸರಕಾರದ ಗಮನ ಸೆಳೆಯಲಾಗಿದೆ ಎಂದರು. ಸಭೆಯಲ್ಲಿ ಪೋಷಕರು, ಸಾರ್ವಜನಿಕರು ಮಾತನಾಡಿ ಕಳೆದ ಪ್ರೌಢಶಾಲೆಯಲ್ಲಿ ಶೇ. ೧೦೦ ಫಲಿತಾಂಶ ಬಂದಿದ್ದು, ಈ ಬಾರಿ ಮಕ್ಕಳ ಭವಿಷ್ಯ ಅತಂತ್ರವಾಗಿದ್ದು, ಅಲ್ಲದೇ ಶಾಲೆಗೆ ಪ್ರಥಮ ದರ್ಜೆ ಸಹಾಯಕರ ಖಾಯಂ ಹುದ್ದೆ ಇದ್ದು ಇಲ್ಲಿಂದ ಕೊಡಗು ಜಿ.ಪಂ. ನಿಯೋಜನೆಗೊಂಡಿದ್ದು, ಇವರನ್ನು ಮತ್ತೆ ಇಲ್ಲಿಗೆ ನಿಯೋಜನೆ ಮಾಡಬೇಕೆಂದು ನಿರ್ಣಯ ಕೈಗೊಳ್ಳಲು ತಿಳಿಸಿದರು. ಶಾಲೆ ಬಂದ್ ಮಾಡಿ ಪ್ರತಿಭಟನೆ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಸಲಹೆ ನೀಡಿದರು. ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಕುದುಪಜೆ ಕಲ್ಪನಾ ಜಗದೀಶ್, ಗ್ರಾ.ಪಂ. ಸದಸ್ಯರಾದ ನಾರಾಯಣ, ಪುರುಷೋತ್ತಮ, ದೇವದತ್ತ, ಮಾಜಿ ಗ್ರಾ.ಪಂ. ಅಧ್ಯಕ್ಷ ಹರೀಶ್, ಮಾಜಿ ಜಿ.ಪಂ. ಸದಸ್ಯೆ ಕವಿತಾ, ವಿವೇಕಾನಂದ ಯೂತ್ ಮೂಮ್ಮೆಂಟ್ ಫೌಂಡೇಶನ್‌ನ ನಿರ್ದೇಶಕ ಅವಿತ್ ಆನಂದರಾಜು, ಅಭಿವೃದ್ಧಿ ಅಧಿಕಾರಿ ಗಣಪತಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೇಕಲ್ ದೇವರಾಜ್, ಸಂಘದ ನಿರ್ದೇಶಕರು, ಪೋಷಕರು, ಶಿಕ್ಷಣ ಪ್ರೇಮಿಗಳು ಹಾಜರಿದ್ದರು.