ಕೂಡಿಗೆ, ಅ. ೧೧ : ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಮುಖ್ಯ ನಾಲೆಯ ಮೂಲಕ ಜಿಲ್ಲೆ ಸೇರಿದಂತೆ ಮೈಸೂರು ,ಹಾಸನ ಜಿಲ್ಲೆಯ ನಾಲ್ಕು ತಾಲೂಕಿನ ಸಾವಿರಾರು ಎಕರೆಗಳಷ್ಟು ಪ್ರದೇಶಗಳಿಗೆ ಬೇಸಾಯ ಮಾಡಲು ಸಮರ್ಪಕವಾದ ನೀರು ಒದಗಿಸುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಮುಂಭಾಗ ದಿಂದ ಏಳನೇ ತೂಂಬಿನವರೆಗೆ ಮುಖ್ಯ ನಾಲೆಯ ದುರಸ್ತಿಗೆ ರೂ. ೪೦ ಕೋಟಿ ವೆಚ್ಚದ ಕಾಮಗಾರಿಗೆ ಹಣ ಬಿಡುಗಡೆಗೊಂಡಿದೆ.

ರಾಜ್ಯಮಟ್ಟದ ಕಾವೇರಿ ನೀರಾವರಿ ನಿಗಮದ ಮೂಲಕ ಹಾರಂಗಿ ಮುಖ್ಯ ನಾಲೆಯ ದುರಸ್ತಿಗೆ ಸಂಬAಧಿಸಿದAತೆ ಕಳೆದ ಅನೇಕ ವರ್ಷಗಳಿಂದಲೂ ನೀರು ಬಳಕೆದಾರ ಸಂಘವು ನಿಗಮಕ್ಕೆ ಈ ಬಗ್ಗೆ ಒತ್ತಾಯ ಮಾಡಿತ್ತು. ಅದಕ್ಕೆ ಪೂರಕವಾಗಿ ಕಳೆದ ಸಾಲಿನ ಬಜೆಟ್‌ನಲ್ಲಿ ನೀರಾವರಿ ಸಚಿವರೊಂದಿಗೆ ಚರ್ಚೆಗಳು ನಡೆದು, ನಂತರ ಕಾವೇರಿ ನೀರಾವರಿ ನಿಗಮದ ಮೂಲಕ ಕಾಮಗಾರಿಯ ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಕೈಗೊಳ್ಳುವ ಯೋಜನೆಯು ಪ್ರಗತಿಯಲ್ಲಿದೆ.

೪೦ ಕೋಟಿ ಯೋಜನೆಯ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದಿದ್ದು ಈಗಾಗಲೇ ಆಂಧ್ರಪ್ರದೇಶದ ಆಂಕುಶ್ ಕಂಪನಿಯವರು ಗುತ್ತಿಗೆ ಪಡೆದಿದ್ದು ಎಲ್ಲಾ ಪ್ರಕ್ರಿಯೆಗಳು ನಡೆದಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳುಗಳಲ್ಲಿ ಕಾಮಗಾರಿಯನ್ನು ಆರಂಭಿಲಾಗುವುದು ಎಂದು ಕಾರ್ಯಪಾಲಕ ಅಭಿಯಂತರ ದೇವೆಗೌಡ ಮಾಹಿತಿ ನೀಡಿದ್ದಾರೆ.

ಮುಖ್ಯ ನಾಲೆಯ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದಿರುವ ಹಿನ್ನೆಲೆಯಲ್ಲಿ ನಾಲೆಯಲ್ಲಿ ಈಗಾಗಲೇ ಕಟ್ಟು ಪದ್ಧತಿಯಲ್ಲಿ ಕೆರೆಕಟ್ಟೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಮುಂದಿನ ಡಿಸೆಂಬರ್ ತಿಂಗಳಲ್ಲಿ ನೀರು ಸ್ಥಗಿತಗೊಳಿಸಿದ ನಂತರ ಮುಖ್ಯ ನಾಲೆಯ ಎರಡು ಬದಿಗಳಲ್ಲಿ ಕಾಂಕ್ರೀಟಿಕರಣ, ಮತ್ತು ಒಳ ನಾಲೆಯ ದುರಸ್ತಿ, ಸುರಂಗ ಮಾದರಿಯ ನಾಲೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳು ಮುಂದಿನ ದಿನಗಳಲ್ಲಿ ನಡೆಯಲ್ಲಿವೆ. ಇದರಿಂದಾಗಿ ಮುಖ್ಯ ನಾಲೆಯಲ್ಲಿ ನೀರು ಸರಾಗವಾಗಿ ಹರಿಯುವುದರಿಂದ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೆ ನೀರು ಒದಗಿಸಲು ಅನುಕೂಲವಾಗುವುದು ಎಂದು ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

-ಕೆ.ಕೆ. ನಾಗರಾಜಶೆಟ್ಟಿ.