ಗೋಣಿಕೊಪ್ಪಲು, ಅ. ೧೦: ಕಾಲೇಜಿನ ಹಳೇ ವಿದ್ಯಾರ್ಥಿಗಳು ಆರ್ಥಿಕವಾಗಿ ನೀಡಿದ ಸಹಾಯಹಸ್ತದಿಂದ ರೂ. ೬೫ ಲಕ್ಷಕ್ಕೂ ಅಧಿಕ ವೆಚ್ಚದ ಕಟ್ಟಡವನ್ನು ನಿರ್ಮಿಸುವ ಮೂಲಕ ಕಟ್ಟಡದ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸಿದಲ್ಲದೆ ಕಂಪ್ಯೂಟರ್ಗಳನ್ನು ನೀಡಿ ವಿದ್ಯಾರ್ಜನೆಗೆ ಉತ್ತಮ ಅವಕಾಶ ನೀಡುವ ಮೂಲಕ ಹಳೆಯ ವಿದ್ಯಾರ್ಥಿ ಸಂಘವು ಸಮಾಜಕ್ಕೆ ಮಾದರಿಯಾಗಿದೆ.
ಗೋಣಿಕೊಪ್ಪ ಕಾವೇರಿ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘವು ಕಾಲೇಜಿನ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ ಕಟ್ಟಡವನ್ನು ಉದ್ಘಾಟನೆ ಮಾಡಲಾಯಿತು. ೨೦೦೩ರಲ್ಲಿ ವಿದ್ಯಾರ್ಥಿ ಸಂಘವು ಅಸ್ತಿತ್ವಕ್ಕೆ ಬಂದಿದ್ದು ಕಾಲೇಜಿನ ಕುಡಿಯುವ ನೀರು ಸೇರಿದಂತೆ ಹಲವು ಪ್ರಯೋಜನಕಾರಿ ಯೋಜನೆಗಳನ್ನು ಇಲ್ಲಿಯ ವಿದ್ಯಾರ್ಥಿಗಳಿಗೆ ಒದಗಿಸಿದೆ.
ಸಕ್ರಿಯ ಹಳೆಯ ವಿದ್ಯಾರ್ಥಿ ಸಂಘದ ಆಡಳಿತ ಮಂಡಳಿಯು ಮುಂದೆಯೂ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರಸ್ತುತ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಲೋಕಾರ್ಪಣೆಗೊಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾಸಂಸ್ಥೆಯ ಅಧ್ಯಕ್ಷ ಇಟ್ಟಿರ ಕೆ. ಬಿದ್ದಪ್ಪ, ಕಾವೇರಿ ವಿದ್ಯಾಸಂಸ್ಥೆಯು ಸಾವಿರಾರು ವಿದ್ಯಾಸಂಸ್ಥೆಗಳಿಗೆ ವಿದ್ಯಾದಾನ ಮಾಡಿದೆ. ಹಲವರು ದೇಶವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಹೊಂದಿದ್ದಾರೆ. ಜಾತಿ, ಧರ್ಮ, ಬೇಧ ಮರೆತು ಶಿಕ್ಷಣವನ್ನು ಸಂಸ್ಥೆ ವತಿಯಿಂದ ನೀಡಲಾಗುತ್ತಿದೆ.
ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರು ತಮ್ಮ ದೈನಂದಿನ ಚಟುವಟಿಕೆಗಳನ್ನು ಬದಿಗೊತ್ತಿ ಕಾಲೇಜಿನ ಮಕ್ಕಳ ಅವಶ್ಯಕತೆಗೆ ಬೇಕಾದ ಪ್ರಯೋಜನಗಳನ್ನು ನೀಡುತ್ತಾ ಬಂದಿದೆ ಎಂದು ಶ್ಲಾಘಿಸಿದ ಅವರು, ೧೯೬೮ರಲ್ಲಿ ದ.ಕೊಡಗಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಆಗಿನ ಹಿರಿಯರು ಕಾಲೇಜನ್ನು ಆರಂಭಿಸಿದ್ದರು. ಇಂದು ಕಾಲೇಜು ಹೆಮ್ಮರವಾಗಿ ಬೆಳೆದಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಲುಮಿನೈ ಅಸೋಸಿಯೇಷನ್ನ ಉಪಾಧ್ಯಕ್ಷ ಕೊಂಗAಡ ಪಿ.ಅಚ್ಚಯ್ಯ, ಹಳೆಯ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಕಾಲೇಜಿನ ಅಭಿವೃದ್ಧಿಗೆ ವಿಶೇಷ ಕಾಣಿಕೆ ನೀಡಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲರ ಸಹಕಾರದಿಂದ ದೊಡ್ಡ ಪ್ರಮಾಣದ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿದೆ. ಮುಂದೆಯೂ ಕಾಲೇಜಿನ ಮೇಲಂತಸ್ತಿನ ಕಟ್ಟಡವನ್ನು ನಿರ್ಮಿಸಲು ಅಲುಮಿನೈ ಅಸೋಸಿಯೇಷನ್ ರೂಪುರೇಷೆ ಸಿದ್ದಪಡಿಸುತ್ತಿದೆ. ಹಳೆಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆ ಯಾರಿಂದಲೂ ದೇಣಿಗೆ ಸ್ವೀಕರಿಸುತ್ತಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಲುಮಿನೈ ಅಸೋಸಿಯೇಷನ್ನ ಅಧ್ಯಕ್ಷರು ಕಾವೇರಿ ಕಾಲೇಜು ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಡಾ. ಮಾಳೇಟಿರ ಬಿ. ಕಾವೇರಪ್ಪ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಬಾರ್ಡ್ ಬ್ಯಾಂಕಿನ ನಿವೃತ್ತ ಅಧಿಕಾರಿ ಮುಂಡAಡ ಸಿ. ನಾಣಯ್ಯ ಮಾತನಾಡಿ, ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ದೊರೆಯುವ ಉತ್ತಮ ಶಿಕ್ಷಣದಿಂದ ನಾನೂ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದರಿಂದ ಕಾಲೇಜು ಹಾಗೂ ಉಪನ್ಯಾಸಕರು ನೀಡಿದ ಕೊಡುಗೆಯನ್ನು ಸದಾ ಸ್ಮರಿಸುತ್ತೇವೆ. ಮುಂದಿನ ಪೀಳಿಗೆಗೆ ಅನುಕೂಲ ಕಲ್ಪಿಸಲು ಹಳೆಯ ವಿದ್ಯಾರ್ಥಿ ಸಂಘವು ಉತ್ತಮ ರೀತಿಯ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರಾದ ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ಬಾಚಂಗಡ ಸರಸ್ವತಿ ಮೊಣ್ಣಪ್ಪ, ಚಿರಿಯಪಂಡ ರವಿ ಪೂಣಚ್ಚ, ಮಾಳೇಟಿರ ಬಿ.ಚಿಕ್ಕು ದೇವಯ್ಯ, ಪೊಕ್ಕಳಿಚಂಡ ಬಿ.ಪೂಣಚ್ಚ, ತಿರುನೆಲ್ಲಿಮಾಡ ಎಂ.ದೇವಯ್ಯ, ಅಸೋಸಿಯೇಷನ್ನ ಕಾರ್ಯದರ್ಶಿ ಪಿ.ವಾಣಿ ಚಂಗಪ್ಪ, ಸಂಚಾಲಕಿ ಎಸ್.ಎಂ. ರಜನಿ, ಖಜಾಂಜಿ ಕೆ.ಸಿ. ಮುತ್ತಪ್ಪ, ಕಾವೇರಿ ಕಾಲೇಜು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕುಲ್ಲಚಂಡ ಕೆ.ಬೋಪಣ್ಣ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ಚಿರಾಗ್ ಪ್ರಾರ್ಥಿಸಿ ಉಪನ್ಯಾಸಕಿ ಸಿ.ಸಿ. ಪೊನ್ನಮ್ಮ, ಪಿ.ಆರ್. ನಿತ್ಯ ನಿರೂಪಿಸಿ ಉಪಾಧ್ಯಕ್ಷ ಕೆ.ಪಿ. ಅಚ್ಚಯ್ಯ ಸ್ವಾಗತಿಸಿ, ಕಾರ್ಯದರ್ಶಿ ವಾಣಿ ಚಂಗಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು, ದಾನಿಗಳ ನಾಮಫಲಕಗಳನ್ನು ಅನಾವರಣಗೊಳಿಸಿದರು.
ಅಲುಮಿನೈ ಅಸೋಸಿಯೇಷನ್ನ ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕಾಲೇಜು ಆವರಣದಲ್ಲಿರುವ ಕಾವೇರಿ ಮಾತೆ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಅತಿಥಿಗಳು ನಮನ ಸಲ್ಲಿಸಿದರು. -ಹೆಚ್.ಕೆ. ಜಗದೀಶ್