ಮಡಿಕೇರಿ, ಅ. ೧೧: ಮಡಿಕೇರಿ ದಸರಾಕ್ಕೆ ದಿನಗಣನೆ ಆರಂಭವಾಗಿದೆ. ಕೇವಲ ಮೂರು ದಿನಗಳಲ್ಲಿ ಅಂದರೆ ತಾ. ೧೫ರ ಸಂಜೆ ಪಂಪಿನಕೆರೆಯಲ್ಲಿ ನಾಲ್ಕು ಶಕ್ತಿ ದೇವತೆಗಳಿಗೆ ಪೂಜೆ ಬಳಿಕ ನಗರ ಸಂಚಾರದ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ದೊರಕಲಿದ್ದು, ನಗರದ ನಾಲ್ಕು ಶಕ್ತಿ ದೇವತೆಗಳ ದೇವಾಲಯಗಳಲ್ಲಿ ತಯಾರಿ ಜೊತೆಗೆ ಪಂಪಿನ ಕೆರೆಯಲ್ಲೂ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.
ತಾ. ೧೬ ರಂದು ಗಾಂಧಿ ಮೈದಾನದಲ್ಲಿ ಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆದಿದ್ದು, ತಾ. ೨೪ರ ಮಂಗಳವಾರದAದು ಅಲಂಕೃತ ದಶಮಂಪಟಗಳ ಭವ್ಯ ಮೆರವಣಿಗೆಗೆ ಆಯಾ ದೇವಾಲಯ ಸಮಿತಿಗಳು ಶ್ರಮಿಸುತ್ತಿವೆ. ಇತ್ತ ದಸರಾ ಹಬ್ಬದ ಜವಾಬ್ದಾರಿ ಹೊತ್ತ ದಸರಾ ಸಮಿತಿ ಹಾಗೂ ಉಪಸಮಿತಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕಾರ್ಯೋನ್ಮುಖವಾಗಿವೆ. ಸರ್ಕಾರದ ಕೇವಲ ೭೫ ಲಕ್ಷ ರೂಪಾಯಿ ಅನುದಾನದಿಂದ ಆರ್ಥಿಕ ಕೊರತೆ ಆದರೂ, ದಾನಿಗಳಿಂದ ಹಣ ಕ್ರೋಢೀಕರಿಸಿ ವೈಭವಯುತ ದಸರಾ ಆಚರಿಸಬೇಕೆಂದು ದಸರಾ ಸಮಿತಿ ಪದಾಧಿಕಾರಿಗಳು ಪಣ ತೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ದಶಮಂಟಪ ಸಮಿತಿಗಳಿಗೆ ತಲಾ ರೂ. ೨ ಲಕ್ಷ ಹಾಗೂ ನಾಲ್ಕು ಕರಗಗಳಿಗೆ ತಲಾ ರೂ. ೧.೫೦ ಲಕ್ಷ ಅನುದಾನ ನೀಡಲು ತೀರ್ಮಾನಿಸಿರುವುದಾಗಿ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರು ಹಾಗೂ ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಅನುದಾನ ಪಡೆಯಲು ಶಾಸಕರ ನೇತೃತ್ವದಲ್ಲಿ ಪುನಃ ಬೆಂಗಳೂರಿಗೆ ನಿಯೋಗ ತೆರಳಲಿರುವುದಾಗಿ ಅವರು ತಿಳಿಸಿದರು. ಹಾಗೇನಾದರೂ ಹೆಚ್ಚುವರಿ ಅನುದಾನ ದೊರೆತರೆ ಮಂಟಪಗಳಿಗೂ ಹೆಚ್ಚಿನ ಅನುದಾನ ಕಲ್ಪಿಸುವ ಸಾಧ್ಯತೆಯಿರುವುದಾಗಿಯೂ ಅವರು ಈ ಸಂದರ್ಭ ನುಡಿದರು.
ಮಂಜೂರಾದ ರೂ. ೭೫ ಲಕ್ಷ ಹಣದ ಪೈಕಿ ರೂ. ೩೫ ಲಕ್ಷವನ್ನು ಗಾಂಧಿಮೈದಾನ ಸಭಾಂಗಣ ವೇದಿಕೆ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ. ಇದೇ ಹಣದಲ್ಲಿ ೯ ದಿನ ಕಾರ್ಯಕ್ರಮಗಳಿಗೆ ಅಗತ್ಯವಾದ ಧ್ವನಿವರ್ಧಕ, ಜನರೇಟರ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಅಲ್ಲದೇ ೧೦ ದಿನಗಳ ಕಾಲ ರಾತ್ರಿ ವೇಳೆ ನಗರದಲ್ಲಿ ವಿದ್ಯುತ್ ದೀಪಾಲಂಕಾರವನ್ನು ಇದೇ ಟೆಂಡರ್ದಾರರು ಮಾಡಲಿದ್ದಾರೆ. ಜೊತೆಗೆ ನಗರ ಅಲಂಕಾರವನ್ನು ಮಾಡಲಾಗುವುದು ಟೆಂಡರ್ ಮೂಲಕ ಈ ಕೆಲಸವನ್ನು ನಿರ್ವಹಿಸಲಾಗುತ್ತಿದೆ ಎಂದರು. ೯ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸಲು ಸಾಂಸ್ಕೃತಿಕ ಸಮಿತಿಗೆ ರೂ. ೧೦ ಲಕ್ಷ ಅನುದಾನ ಕಲ್ಪಿಸಲಾಗಿದೆ.
(ಮೊದಲ ಪುಟದಿಂದ) ಆದರೆ ಈ ಪೈಕಿ ಒಂದು ದಿನ ಜಾನಪದ ಪರಿಷತ್ನ ಕಾರ್ಯಕ್ರಮ ಹಾಗೂ ಮತ್ತೊಂದು ದಿನದ ಮಹಿಳಾ ದಸರಾ ಕಾರ್ಯಕ್ರಮವೂ ಒಳಗೊಂಡಿದೆ ಎಂದರು. ತಾ. ೨೪ರ ರಾತ್ರಿವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಬಳಿಕ ತಾ. ೨೫ರ ಬೆಳಿಗ್ಗಿನವರೆಗೆ ಸಂಗೀತ ರಸಸಂಜೆ ಕಾರ್ಯಕ್ರಮಕ್ಕಾಗಿ ಪ್ರತ್ಯೇಕ ರೂ. ೩ ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ.
ಕ್ರೀಡಾ ಚಟುವಟಿಕೆಗಳಿಗಾಗಿ ಕ್ರೀಡಾ ಸಮಿತಿಗೆ ರೂ. ೫೦ ಸಾವಿರ, ಯುವ ದಸರಾ ಕಾರ್ಯಕ್ರಮಗಳಿಗಾಗಿ ರೂ. ೫೦ ಸಾವಿರ, ಕವಿಗೋಷ್ಠಿಗಾಗಿ ರೂ. ೪೦ ಸಾವಿರವನ್ನು ಒದಗಿಸಲಾಗುವುದು ಎಂದರು.
ಮಕ್ಕಳ ದಸರಾವನ್ನು ರೋಟರಿ ಕ್ಲಬ್ ನಿರ್ವಹಿಸಲಿದೆ ಎಂದು ತಿಳಿಸಿದರು. ಆದರೆ ಕ್ರೀಡಾ ಸಮಿತಿ ಮತ್ತು ಯುವ ದಸರಾಕ್ಕೆ ಇನ್ನೂ ಹೆಚ್ಚಿನ ಹಣದ ಅಗತ್ಯವಿದ್ದು, ಇದಕ್ಕಾಗಿ ಮುಖ್ಯ ದಸರಾ ಸಮಿತಿಯಿಂದಲೇ ರಶೀದಿಗಳನ್ನು ಮುದ್ರಿಸಲಾಗಿದೆ. ಈ ರಶೀದಿ ಮೂಲಕವೇ ಉಪಸಮಿತಿಗಳು ಹಣ ಸಂಗ್ರಹಾತಿ ಮಾಡಿ ಕಾರ್ಯಕ್ರಮಕ್ಕೆ ಬಳಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ರಸ್ತೆ ದುರಸ್ತಿ
ದಸರಾ ಸಂದರ್ಭ ಸುಸೂತ್ರವಾಗಿ ಮಂಟಪಗಳ ಚಾಲನೆಗೆ ಕರಗಗಳ ಪ್ರದಕ್ಷಿಣೆಗೆ ಅನುಕೂಲವಾಗುವಂತೆ ಈಗಾಗಲೇ ಅಲ್ಲಲ್ಲಿ ರಸ್ತೆ ದುರಸ್ತಿ ಕಾರ್ಯವನ್ನು ಪ್ರಾರಂಭಿಸಲಾಗಿದೆ. ದಸರಾ ಆಚರಣೆಗೆ ಮುನ್ನ ಈ ಕಾರ್ಯವು ಪೂರ್ಣಗೊಳ್ಳಲಿದೆ ಎಂದು ಅಧ್ಯಕ್ಷೆ ಅನಿತಾ ಪೂವಯ್ಯ ವಿಶ್ವಾಸ ವ್ಯಕ್ತಪಡಿಸಿದರು.