ಮಡಿಕೇರಿ, ಅ. ೧೧: ಕಂಡಕರೆಯ ಗಾಂಧಿ ಯುವಕ ಸಂಘದ ವತಿಯಿಂದ ಡಿಸೆಂಬರ್ ತಿಂಗಳಿನಲ್ಲಿ ಚೆಟ್ಟಳ್ಳಿಯಲ್ಲಿ ಆಯೋಜಿಸಿರುವ ಸರ್ವಧರ್ಮೀಯರ ಸಾಮೂಹಿಕ ವಿವಾಹ ಕಾರ್ಯಕ್ರಮದ ಅರ್ಜಿಗಳನ್ನು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಇ ತೀರ್ಥಕುಮಾರ್ ಬಿಡುಗಡೆಗೊಳಿಸಿದರು.

ಗುತ್ತಿಗೆದಾರ ಸಿ.ಕೆ. ಷಂಶುದ್ದೀನ್ ಉದ್ಘಾಟಿಸಿ ಮಾತನಾಡಿ, ಸಂಘವನ್ನು ಸ್ಥಾಪಿಸಿ ಸಮಾಜ ಸೇವೆ ಮಾಡುತ್ತಾ ಬಂದಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಮಾಜ ಸೇವಕಿ ಶಹರುಬಾನು, ಚೆಟ್ಟಳ್ಳಿ ಗ್ರಾಮದಲ್ಲಿ ಸರ್ವಧರ್ಮೀಯ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿ ನೆರವಾಗುತ್ತಿರುವುದು ಎಲ್ಲರಿಗೂ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗಾಂಧಿ ಯುವಕ ಸಂಘ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ, ಅಧಿಕೃತವಾಗಿ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಅರ್ಜಿ ವಿತರಣೆಯಾಗಲಿದೆ. ಅರ್ಹ ಬಡ ಹೆಣ್ಣು ಮಕ್ಕಳನ್ನು ಗುರುತಿಸುವ ಉದ್ದೇಶದಿಂದ, ಅರ್ಜಿ ವಿಲೇವಾರಿ ಸಮಿತಿಯನ್ನು ಪ್ರತ್ಯೇಕವಾಗಿ ರಚನೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಷರೀಫ್ ಪಿ.ಎಂ. ನಿರೂಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿ ಯುವಕ ಸಂಘ ಹಿರಿಯ ಉಪಾಧ್ಯಕ್ಷ, ಅರ್ಜಿ ವಿಲೇವಾರಿ ಸಮಿತಿಯ ಸಂಚಾಲಕ ಓ.ಎಸ್. ಸುಹೈಲ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಸ್ಜಿದ್ ತಖ್ವಾ ಮುಸ್ಲಿಂ ಜಮಾಅತ್ ಸ್ವಲಾತ್ ಕಮಿಟಿ ಅಧ್ಯಕ್ಷ ಕೆ.ಎ ಉಸೈನ್, ಗ್ರಾಮಸ್ಥರಾದ ಓ.ಎಂ ಶುಕ್ಕೂರ್, ಪಿ.ಎಚ್ ಮುಸ್ತಫಾ, ಅಶ್ರಫ್, ಗಾಂಧಿ ಯುವಕ ಸಂಘದ ಉಪಾಧ್ಯಕ್ಷ ಉನೈಸ್ ಕೆ.ಎಂ, ಸವಾದ್ ಉಸ್ಮಾನ್, ಕಾರ್ಯದರ್ಶಿ ಕೆ.ಎಂ. ಇರ್ಷಾದ್ ಹಾಗೂ ಸದಸ್ಯರು ಹಾಜರಿದ್ದರು.