ಗೋಣಿಕೊಪ್ಪಲು, ಅ. ೮: ಜ್ಞಾನಕ್ಕಿಂತ ಸಂಪತ್ತಿಲ್ಲ, ಅಜ್ಞಾನಕ್ಕಿಂತ ಬಡತನವಿಲ್ಲ ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳು ಕಠಿಣ ಶ್ರಮದೊಂದಿಗೆ ವಿದ್ಯಾಭ್ಯಾಸ ನಡೆಸಿ ಉತ್ತಮ ಅಂಕ ಪಡೆದು ಹೊರಹೊಮ್ಮಿದ್ದಲ್ಲಿ ಮುಂದಿನ ಸಾಧನೆಗೆ ಉತ್ತಮ ಅವಕಾಶ ದೊರೆಯಲಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಓದಿನ ಅವಧಿಯನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ರಾಜ್ಯ ಕಾಂಗ್ರೆಸ್ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಕರೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ವತಿಯಿಂದ ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಬಿ.ಎ. ಬಿಕಾಂ, ಬಿಬಿಎ ಅಂತಿಮ ಪದವಿ ತರಗತಿಗಳಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತಮ ಶಿಕ್ಷಕರಿಂದ ಸಾಕಷ್ಟು ಜ್ಞಾನವನ್ನು ವಿದ್ಯಾರ್ಥಿಗಳು ಪಡೆಯಲು ಸರ್ಕಾರಿ ಕಾಲೇಜುಗಳು ಉತ್ತಮ ವೇದಿಕೆ ಆಗುತ್ತಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಕಠಿಣ ಶ್ರಮ ವಹಿಸಿ ಜೀವನದಲ್ಲಿ ಉತ್ತಮ ಸಾಧನೆ ಮಾಡುವಂತಾಗಬೇಕು. ಉದ್ಯೋಗ ಲಭಿಸಿದ ನಂತರ ಸಮಾಜಕ್ಕೆ ತಮ್ಮ ಕೊಡುಗೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ದಸಂಸ ಕಾರ್ಯಕ್ರಮ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ. ವೀರಾಜಪೇಟೆ ಪದವಿ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗ ತೆರೆಯಲು ಕ್ಷೇತ್ರದ ಶಾಸಕರೊಂದಿಗೆ ಪ್ರಸ್ತಾಪಿಸಲಾಗುವುದು ಕಾಲೇಜಿನ ಅಭಿವೃದ್ಧಿಗೆ ಪೂರಕ ಬೆಂಬಲ ನೀಡುವ ಆಶಾ ಭಾವನೆಯನ್ನು ವ್ಯಕ್ತ ಪಡಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಹೆಚ್.ಎಲ್. ದಿವಾಕರ್ ಪ್ರಸ್ತಾವಿಕವಾಗಿ ಮಾತನಾಡಿ, ಕಳೆದ ೧೨ ವರ್ಷಗಳಿಂದ ಸಂಘಟನೆ ವತಿಯಿಂದ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ತೆರಳಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸನ್ಮಾನ ಸ್ವೀಕರಿಸಿದ ಹಲವು ವಿದ್ಯಾರ್ಥಿಗಳು ಕೆ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಉತ್ತಮ ಉದ್ಯೋಗದಲ್ಲಿದ್ದಾರೆ. ಇದು ಮಾದರಿ ಆಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಹೆಚ್ಚಿನ ಧೈರ್ಯ ತುಂಬಲು ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ್ ದಸಂಸ ಸಂಘಟನೆಯು ಶಿಕ್ಷಕರಿಗೆ ನೀಡಿರುವ ಸನ್ಮಾನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ.
ವಿದ್ಯಾರ್ಜನೆಗೆ ಪೂರಕವಾದ ವಾತಾವರಣವಿದ್ದು ಉಪನ್ಯಾಸಕರು ವಿದ್ಯಾರ್ಥಿಗಳನ್ನು ಸದೃಢಗೊಳಿಸಿ ಉತ್ತಮ ಅಂಕದೊAದಿಗೆ ತೇರ್ಗಡೆಯಾಗಲು ಶ್ರಮಿಸುತ್ತಿದ್ದಾರೆ. ತಾಲೂಕಿನಲ್ಲಿ ಏಕೈಕ ಸರ್ಕಾರಿ ಪದವಿ ಕಾಲೇಜು ಇರುವುದರಿಂದ ಸಾಕಷ್ಟು ವಿದ್ಯಾರ್ಥಿಗಳು ತಾಲೂಕಿನ ವಿವಿಧ ಭಾಗದಿಂದ ಆಗಮಿಸುತ್ತಿದ್ದಾರೆ. ಉತ್ತಮ ಫಲಿತಾಂಶದೊAದಿಗೆ ನ್ಯಾಕ್ಗ್ರೇಡ್ ಪಡೆದ ಸರ್ಕಾರಿ ಕಾಲೇಜು ಆಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡ, ನಿವೃತ್ತ ಯೋಧ ಗಣೇಶ್ ಉಪಸ್ಥಿತರಿದ್ದರು. ದಸಂಸ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಸಂತೋಷ್ ಸ್ವಾಗತಿಸಿ, ಪದವಿ ಕಾಲೇಜಿನ ವಿದ್ಯಾರ್ಥಿ ಹೆಚ್.ಎ. ಅಜಿತ್ ನಿರೂಪಿಸಿ, ಬಿ.ಡಿ. ಚೇತನ್ ವಂದಿಸಿದರು. ಮಡಿಕೇರಿ ನಗರ ಸಂಚಾಲಕ ಲೋಕನಾಥ್ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.