ಸೋಮವಾರಪೇಟೆ, ಅ. ೮ : ಅರೇಬಿಕಾ ಕಾಫಿಯನ್ನು ಹೆಚ್ಚು ಬೆಳೆಯುವ ಉತ್ತರ ಕೊಡಗಿನ ಬೆಳೆಗಾರರಿಗೆ ಬಿಳಿಕಾಂಡಕೊರಕ ಕೀಟ ಕಂಟಕಪ್ರಾಯವಾಗಿ ಪರಿಣಮಿಸಿದೆ. ಫಸಲಿನ ಗಿಡಗಳನ್ನೇ ಗುರಿಯಾಗಿಸಿಕೊಂಡು ಈ ಕೀಟ ದಾಳಿ ನಡೆಸುತ್ತಿದ್ದು, ಬೆಳೆಗಾರ ವರ್ಗ ಪ್ರತಿ ವರ್ಷವೂ ಫಸಲಿನೊಂದಿಗೆ ಗಿಡಗಳನ್ನೂ ಕಳೆದುಕೊಳ್ಳಬೇಕಾದ ಸಂಕಷ್ಟಕ್ಕೆ ಒಳಗಾಗುತ್ತಿದೆ.

ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಬಿಸಿಲ ಧಗೆ ಹೆಚ್ಚಾಗಿದ್ದು, ಕಾಫಿ ತೋಟದಲ್ಲಿ ಬಿಳಿಕಾಂಡಕೊರಕ ಹಾವಳಿ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಾರರು ಆತಂಕಗೊAಡಿದ್ದಾರೆ. ರೋಗ ಪೀಡಿತ ಕಿತ್ತ ಕಾಫಿ ಗಿಡಗಳನ್ನು ತೋಟದ ಸಮೀಪ ಸಂಗ್ರಹಿಸಿಡುತ್ತಿರುವ ಪರಿಣಾಮ ಬಿಳಿಕಾಂಡಕೊರಕ ಕೀಟಬಾಧೆ ಆರೋಗ್ಯವಂತ ಗಿಡಗಳನ್ನು ಬಾಧಿಸುತ್ತಿವೆ.

ಕಿತ್ತ ಕಾಫಿ ಬುಡಗಳನ್ನು ಕೆಲವರು ಬೆಂಕಿ ಹಾಕಿ ಸುಟ್ಟರೆ, ಇನ್ನು ಕೆಲವರು ತೋಟದ ಸಮೀಪವೇ ಹಾಕುತ್ತಿದ್ದಾರೆ. ಇಂತಹ ಬುಡದೊಳಗೆ ಇರುವ ಕೀಟ, ಹೊರಬಂದು ಮತ್ತೆ ತೋಟದೊಳಗಿನ ಆರೋಗ್ಯವಂತ ಗಿಡಕ್ಕೆ ಸೇರುತ್ತಿದೆ.

ಬೋರರ್‌ಗೆ ತುತ್ತಾದ ಕಾಫಿ ಗಿಡಗಳನ್ನು ಪ್ರತಿ ವರ್ಷವೂ ಕೀಳಲೇಬೇಕಾದ ಪರಿಸ್ಥಿತಿ ಇದೆ. ಕಳೆದ ವರ್ಷ ಒಂದು ಕಾಫಿ ಬುಡಕ್ಕೆ ೧೦ ರಿಂದ ೧೫ ರೂ. ಬೆಲೆ ಇತ್ತು. ಪ್ರಸಕ್ತ ವರ್ಷ ಕಡಿಮೆ ಬೆಲೆಗೆ ಕೆಲವರು ಖರೀದಿ ಮಾಡುತ್ತಿದ್ದಾರೆ. ಹಿಂದೆ ಮೈಸೂರು, ಹಾಸನ ಜಿಲ್ಲೆಯ ಹೊಗೆಸೊಪ್ಪು ಬೆಳೆಗಾರರು, ಕಾಫಿ ಬುಡಗಳನ್ನು ದುಪ್ಪಟ್ಟು ಹಣ ನೀಡಿ ಖರೀದಿ ಮಾಡುತ್ತಿದ್ದರು. ಆದರೆ ಪ್ರಸಕ್ತ ವರ್ಷ ಅಷ್ಟೊಂದು ಬೇಡಿಕೆ ಇಲ್ಲವಾಗಿದೆ.

ಪ್ರಸಕ್ತ ವರ್ಷ ಮಳೆಯ ಅಭಾವ ಹೆಚ್ಚಾಗಿದ್ದು, ಇದೀಗ ಬೋರರ್ ಹುಳ ಬಾದಿತ ಗಿಡಗಳ ಬಣ್ಣ ಬದಲಾಗುತ್ತಿದೆ. ಆರೋಗ್ಯವಂತ ಗಿಡಗಳು ಮಂಕಾಗುತ್ತಿವೆ. ಅಂತಹ ಗಿಡಗಳನ್ನು ಕಿತ್ತು ಹೊಸ ಗಿಡಗಳನ್ನು ನೆಡಲಾಗುತ್ತಿದೆ. ಶಾಂತಳ್ಳಿ, ಬೆಟ್ಟದಳ್ಳಿ, ಹರಗ, ಕಿರಗಂದೂರು, ತಾಕೇರಿ ವ್ಯಾಪ್ತಿಯಲ್ಲಿ ಎಕರೆಗೆ ೩೦ ರಿಂದ ೫೦ ಗಿಡಗಳು ಬೋರರ್ ಹುಳುಗಳಿಂದ ನಾಶವಾಗುತ್ತಿವೆ. ಶನಿವಾರಸಂತೆ, ಸೋಮವಾರಪೇಟೆ, ಗಣಗೂರು, ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಗಿಡಗಳು ಬೋರರ್ ಹಾವಳಿಗೆ ಒಳಾಗುತ್ತಿವೆ.

ಮಳೆಗಾಲದಲ್ಲಿ ಬಿಸಿಲಿನ ವಾತಾವರಣ ನಿರ್ಮಾಣವಾದ್ದರಿಂದ ಕಾಂಡಕೊರಕ ಕೀಟಗಳ ಸಂತಾ ನೋತ್ಪತ್ತಿಯೂ ಹೆಚ್ಚಾಗಿದೆ. ಕೆಲವೇ ದಿನಗಳಲ್ಲಿ ಕಾಫಿ ಗಿಡಗಳ ಕಾಂಡದೊಳಗೆ ಸೇರಿ, ಕೊರೆಯಲು ಪ್ರಾರಂಭಿಸುತ್ತವೆ. ಕ್ರಮೇಣ ಕಾಫಿ ಗಿಡಗಳಲ್ಲಿ ಫಸಲು ಕಡಿಮೆಯಾಗಿ ಇಡೀ ತೋಟವೇ ಕಾಂಡಕೊರಕ ಕೀಟಕ್ಕೆ ಬಲಿಯಾಗುತ್ತದೆ. ಇದ ರಿಂದಾಗಿ ಭಾರೀ ಸಮಸ್ಯೆ ಎದುರಿಸು ವಂತಾಗಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಬಿಳಿಕಾಂಡಕೊರಕಗಳು ಕಾಫಿ ಗಿಡದ ಕಾಂಡವನ್ನು ಕೊರೆದು ತಿನ್ನುತ್ತಿರುವುದರಿಂದ, ಫಸಲು ಕೊಡುತ್ತಿದ್ದ ಗಿಡಗಳು ಸಾಯುತ್ತಿವೆ. ಗಿಡಗಳನ್ನು ಕಿತ್ತು ಕೂಡಲೇ ಸುಡಬೇಕು. ತೋಟದ ಬದಿಯಲ್ಲಿ ಸಂಗ್ರಹ ಮಾಡಬಾರದು. ಈ ಬಗ್ಗೆ ಎಲ್ಲಾ ಬೆಳೆಗಾರರಿಗೆ ತಿಳುವಳಿಕೆ ನೀಡಲಾಗಿದೆ. ಒಂದು ವೇಳೆ ತಕ್ಷಣಕ್ಕೆ ವಿಲೇವಾರಿ ಮಾಡಲು ಅಸಾಧ್ಯವಾದರೆ ಬುಡಗಳನ್ನು ೧೫ ದಿನಗಳ ಕಾಲ ನೀರಿನಲ್ಲಿ ಮುಳುಗಿಸಿಟ್ಟು, ನಂತರ ಮಾರಾಟ ಮಾಡಬಹುದು. ಈ ಕೆಲಸವನ್ನು ಎಲ್ಲಾ ಬೆಳೆಗಾರರು ಸಾಮೂಹಿಕವಾಗಿ ನಿಗದಿತ ಸಮಯದಲ್ಲಿ ಮಾಡಿದರೆ ಮಾತ್ರ ರೋಗಬಾಧೆ ಹತೋಟಿ ಸಾಧ್ಯ. ಇಲ್ಲವಾದರೆ ಬೋರರ್ ಕೀಟವನ್ನು ಬೆಳೆಗಾರರೇ ಪೋಷಿಸಿದಂತಾಗುತ್ತದೆ ಎಂದು ಕಾಫಿ ಮಂಡಳಿಯ ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

- ವಿಜಯ್ ಹಾನಗಲ್