ಶನಿವಾರಸಂತೆ, ಅ. ೭: ಮಠ ಮಾನ್ಯಗಳಿಂದ ಸಮಾಜದಲ್ಲಿ ಸಮಾನತೆ ಸಾಧಿಸಬಹುದಾಗಿದ್ದು ವಿವಿಧ ಜಾತಿ ಜನಾಂಗದವರು ಭಕ್ತರಾಗಿ ಆಗಮಿಸುವುದರಿಂದ ಮೇಲು-ಕೀಳು ಭಾವನೆ ಬರುವುದಿಲ್ಲ. ವಿದ್ಯೆ, ದಾಸೋಹ ಸೇವೆಗಳಲ್ಲೂ ಮಠಗಳ ಸೇವೆ ಅವಿಸ್ಮರಣೀಯ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟಿçÃಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಅಂಕನಹಳ್ಳಿ ಗ್ರಾಮದ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ ನಡೆದ ಶ್ರೀ ವೀರಭದ್ರೇಶ್ವರ ವರ್ದಂತಿ ಮಹೋತ್ಸವ, ಗಣಪತಿ ವಿಸರ್ಜನೆ, ಶ್ರೀಗುರುಸಿದ್ಧವೀರೇಶ್ವರ ತಿಂಗಳ ಮಹಾಮಂಗಳಾರತಿ, ಜ್ಞಾನಧಾರೆ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಮಾತನಾಡಿ, ವೀರಭದ್ರ ಸ್ವಾಮಿ ಸಾಕ್ಷಾತ್ ಶಿವನೇ ತೊಂದರೆಯಲ್ಲಿದ್ದಾಗ ರಕ್ಷಣೆಗೆ ಅವತರಿಸಿದ ದೈವ ಪುರುಷ. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಮಾಡಿ, ಸರ್ವರಿಗೂ ಒಳಿತನ್ನು ಮಾಡುವ ದೇವರಾಗಿದ್ದು ಕ್ಷಾತ್ರ ತೇಜಸ್ಸಿನ ಪ್ರತೀಕ. ಆತನ ಆಕಾರವೇ ಅತ್ಯಂತ ವಿಸ್ಮಯ ಮತ್ತು ಪವಾಡ ಸದೃಶವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮನೆಹಳ್ಳಿ ಮಠಾಧ್ಯಕ್ಷ ಮಹಾಂತಶಿವಲಿAಗ ಸ್ವಾಮೀಜಿ ಮಾತನಾಡಿ, ದೇವರೆಂದರೆ ಸತ್ಯ, ಸತ್ಯವೆಂದರೆ ನುಡಿದಂತೆ ನಡೆಯುವುದು, ನಡೆದಂತೆ ನುಡಿಯುವುದು ಇವೆಲ್ಲಾ ಬಸವಣ್ಣನವರು ಜಗತ್ತಿಗೆ ತೋರಿದ ಜೀವನದ ದಾರಿದೀಪ್ತಿ. ಇವೆಲ್ಲವನ್ನು ಆಚರಣೆಯಲ್ಲಿ ತಂದಾಗ ಮಾತ್ರ ಪ್ರತಿಫಲ ಸಿಗುತ್ತದೆ ಎಂದರು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ತಪೋವನ ಕ್ಷೇತ್ರ ಮನೆಹಳ್ಳಿ ಮಠದ ಸಹಭಾಗಿತ್ವದಲ್ಲಿ ಮಹೋತ್ಸವದ ಅಂಗವಾಗಿ ಮಠದ ಕ್ಷೇತ್ರ ದೈವ ವೀರಭದ್ರ ಸ್ವಾಮಿಗೆ ವಿಶೇಷ ಪೂಜೆ, ಉತ್ಸವ ನಡೆಯಿತು.
ದೊಡ್ಡಬಳ್ಳಾಪುರ ಮಠದ ನಿಶ್ಚಲ ದೇಶೀಕೇಂದ್ರ ಸ್ವಾಮೀಜಿ, ಕಲ್ಲು ಮಠದ ಮಹಾಂತ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ತಹಶೀಲ್ದಾರ್ ಎಸ್.ನರಗುಂದ, ಸಿದ್ಧಗಂಗಾ ಮಠದ ಬೆಂಗಳೂರು ಶಾಖೆ ಮಹಿಳಾ ಸಂಘಟನಾ ಘಟಕದ ಅಧ್ಯಕ್ಷೆ ಉಷಾ ಯೋಗಾನಂದ್, ಪ್ರಮುಖ ಕೆ.ಜಿ.ಸುರೇಶ್ ಹಾಗೂ ಪಾರ್ಯಕ್ರಮಕ್ಕೆ ಸಹಕರಿಸಿದ ಪ್ರಮುಖರು, ವಿವಿಧ ಗ್ರಾಮಗಳ ವೀರಭದ್ರೇಶ್ವರ ದೇವಾಲಯಗಳ ಅಧ್ಯಕ್ಷರುಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು.
ವೀರಶೈವ ಲಿಂಗಾಯತ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ.ದಿವಾಕರ್, ಮಾಧ್ಯಮ ಕಾರ್ಯದರ್ಶಿ ಎನ್.ಎ.ಅಶ್ವಥ್ ಕುಮಾರ್, ಕಾರ್ಯದರ್ಶಿ ದಯಾನಂದ್, ತಾಲೂಕು ಘಟಕದ ಅಧ್ಯಕ್ಷ ಜಿ.ಬಿ.ಜಯರಾಜ್, ಜಿಲ್ಲೆ, ತಾಲೂಕು, ಹೋಬಳಿ ಘಟಕಗಳ ಸಮಿತಿ ಸದಸ್ಯರು ಇದ್ದರು. ಕುಶಾಲನಗರ ಅಕ್ಕನ ಬಳಗದ ಸದಸ್ಯೆಯರು ವಚನ ಗೀತಗಾಯನ ಕಾರ್ಯಕ್ರಮ ನೀಡಿದರು.
ತಡರಾತ್ರಿ ವಿದ್ಯುತ್ ಅಲಂಕೃತ ವಾಹನದಲ್ಲಿ ಕ್ಷೇತ್ರನಾಥ, ಪುರಾತನ ವೀರಭದ್ರೇಶ್ವರ, ಗುರುಸಿದ್ಧವೀರೇಶ್ವರ, ಗಣಪತಿ ದೇವರ ಮೂರ್ತಿಯನ್ನಿರಿಸಿ ಮಂಗಳ ವಾದ್ಯ, ವೀರಗಾಸೆ, ದುಗ್ಗಳ-ಚಾಮರ ಸೇವೆಯೊಂದಿಗೆ ವಿಜೃಂಭಣೆಯ ಉತ್ಸವ ಸಂಪನ್ನವಾಯಿತು. ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು.